Puneth Rajkumar: ಇಂದು ನಟ ಪುನೀತ್ 11ನೇ ದಿನದ ಪುಣ್ಯತಿಥಿ: ಕುಟುಂಬಸ್ಥರಿಂದ ಸಮಾಧಿಗೆ ಪೂಜೆ ಸಲ್ಲಿಕೆ

ಬೆಂಗಳೂರು: ನಟ, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ 11 ನೇ ದಿನದ ಪುಣ್ಯಾರಾಧನೆ ಇಂದು ನಡೆಯಿತು. ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪುವಿನ ಸಮಾಧಿ ಸ್ಥಳದಲ್ಲಿ ಇಂದು ಅವರ ಕುಟುಂಬಸ್ಥರು ಪೂಜೆ ನೆರವೇರಿಸಿದರು.
ನಟ ಪುನೀತ್ ರಾಜ್ ಕುಮಾರ್ ಸಮಾಧಿಗೆ ಪತ್ನಿ ಅಶ್ವಿನಿ, ಪುತ್ರಿಯರಾದ ಧೃತಿ, ವಂದಿತಾ ಹಾಗೂ ನಟ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ವಿನಯರಾಜ್ ಕುಮಾರ್, ಯುವರಾಜ್ ಕುಮಾರ್ ಸೇರಿದಂತೆ ಕುಟುಂಬಸ್ಥರು ಸಮಾಧಿ ಬಳಿ ಹಣ್ಣು ಹಂಪಲು, ವಿಶೇಷ ತಿಂಡಿ ತಿನಿಸುಗಳನ್ನಿಟ್ಟು ಎಡೆಹಾಕಿ ಅಪ್ಪುವಿಗೆ ಇಷ್ಟವಾದ ತಿಂಡಿ ತಿನಿಸುಗಳನ್ನು ಅವರ ಸಮಾಧಿ ಸ್ಥಳದಲ್ಲಿಟ್ಟು ಪೂಜೆ ನೆರವೇರಿಸಿದರು.
ಬೆಂಗಳೂರಿನ ಸದಾಶಿವ ನಗರದ ಅಪ್ಪು ಮನೆಯಿಂದ ಎಲ್ಲರೂ ಒಂದೇ ಬಸ್ ನಲ್ಲಿ ಸಮಾಧಿ ಸ್ಥಳಕ್ಕೆ ಆಗಮಿಸಿದರು. ಪೂಜೆ ಮುಗಿಸಿದ ತರುವಾಯ ಕುಟುಂಬಸ್ಥರು ಮತ್ತೆ ಮನೆಗೆ ವಾಪಾಸಾಗಿ ಅಲ್ಲಿ ಕೂಡ ಹಲವು ಪೂಜಾ ಕಾರ್ಯ ನೆರವೇರಿಸಿದರು.
ಇನ್ನು ಅಭಿಮಾನಿಗಳು ಕೂಡ ಅಪ್ಪುವಿಗೆ ಇಷ್ಟವಾದ ಜೋಳದ ರೊಟ್ಟಿ ಸೇರಿದಂತೆ ಇತರೆ ತಿಂಡಿ ತಿನಿಸುಗಳನ್ನು ತಂದು ಸಮಾಧಿ ಸ್ಥಳದಲ್ಲಿಟ್ಟರು.
ಇದೇ ವೇಳೆ ಪುನೀತ್ ಅವರಿಗೆ ಪದ್ಮಶ್ರೀ ನೀಡಬೇಕೆಂಬ ಅಭಿಮಾನಿಗಳ ಆಗ್ರಹಕ್ಕೆ ಪ್ರತಿಕ್ರಿಯಿಸಿದ ಶಿವಣ್ಣ, ಅಪ್ಪು ಎಲ್ಲರ ಹೃದಯದಲ್ಲಿ ಶ್ರೀ ಆಗಿರುತ್ತಾನೆ. ಅವನು ಅಮರಶ್ರೀ ಎಂದು ಹೇಳಿದರು. ಕಂಠೀರವ ಸ್ಟುಡಿಯೋ ಬಳಿ ಅಭಿಮಾನಿಗಳಿಗೆ ಪುಲಾವ್ ಮತ್ತು ಕೇಸರಿಬಾತ್ ವಿತರಿಸಲಾಯ್ತು.



