ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಬಸವರಾಜ ಬೊಮ್ಮಾಯಿ

ಮೈಸೂರು : ಹಿಂಗಾರು ಹೆಚ್ಚಾಗಿ ಬಿದ್ದಿದ್ದರಿಂದ ತುಂಬಿ ತುಳುಕುತ್ತಿರುವ ಕಬಿನಿ ಜಲಾಶಯಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಇಂದು ಬಾಗಿನ ಸಮರ್ಪಣೆ ಮಾಡಿದರು.
ಮೈಸೂರು ಜಿಲ್ಲೆ ಹೆಚ್ ಡಿ ಕೋಟೆ ತಾಲ್ಲೂಕಿನ ಬೀಚನಹಳ್ಳಿ ಗ್ರಾಮದ ಬಳಿಯಿರುವ ಕಬಿನಿ ಜಲಾಶಯಕ್ಕೆ ಸಂಪ್ರದಾಯ ಬದ್ದವಾಗಿ ವಿಶೇಷ ಪೂಜೆ ಸಲ್ಲಿಸಿ ಸಿಎಂ ಬಸವರಾಜ ಬೊಮ್ಮಾಯಿ ಬಾಗಿನ ಸಮರ್ಪಿಸಿದರು. ಕೆ ಆರ್ ಎಸ್ ಜಲಾಶಯ ಇತ್ತೀಚೆಗೆ ಭರ್ತಿಯಾಗಿದ್ದರಿಂದ ಕಬಿನಿ ಜಲಾಶಯಕ್ಕೆ ತಡವಾಗಿ ಬಾಗಿನ ಸಮರ್ಪಣೆ ಮಾಡಲಾಯಿತು. ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಸಚಿವರಾದ ಗೋವಿಂದ ಕಾರಜೋಳ, ಎಸ್ ಟಿ ಸೋಮಶೇಖರ್, ಶಾಸಕರಾದ ಅನಿಲ್ ಚಿಕ್ಕಮಾದು, ಎನ್ ಮಹೇಶ್ ಸೇರಿದಂತೆ ಸ್ಥಳೀಯ ಮುಖಂಡರು ಸಾಥ್ ನೀಡಿದರು.
ಬಾಗಿನ ಅರ್ಪಿಸಿದ ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯದಲ್ಲಿ ಜಲಾಶಯಗಳು ತುಂಬಿವೆ. ಜಲಾಶಯಗಳಿಗೆ ಬಾಗಿನ ಅರ್ಪಿಸುವುದು ಖುಷಿಯ ವಿಚಾರ. ನಮಗಿಂತ ರೈತರಿಗೆ ಖುಷಿಯಾದರೆ ನಮಗೆ ಸಂತೋಷ. ಈ ಹಿಂದೆ ಕೂಡ ನೀರಾವರಿ ಸಚಿವನಾಗಿ ಬಾಗಿನ ಅರ್ಪಿಸಿದ್ದೇನೆ ಎಂದರು.
ಕಬಿನಿ ಜಲಾಶಯದ ಮುಂದೆ ಬೃಂದಾವನ ಮಾದರಿ ಮಾಡುವ ಪ್ರಸ್ತಾಪ ಹಿಂದಿನಿಂದಲೂ ಇದೆ. ಅದನ್ನೆಲ್ಲ ಪರಿಶೀಲನೆ ಮಾಡುತ್ತೇವೆ ಎಂದರು. ಉಪಚುನಾವಣೆ ಫಲಿತಾಂಶ ಕುರಿತು ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಫಲಿತಾಂಶ ಬರಲು ಇನ್ನು ಸಮಯ ಇದೆ. ಹಾನಗಲ್ ನಲ್ಲಿ ಈ ರೀತಿಯ ಪೈಪೋಟಿ ನಿರೀಕ್ಷೆಯಲ್ಲಿದ್ದೆವು. ಯಾವಾಗಲೂ ಅಲ್ಲಿ ಪೈಪೋಟಿ ಇದ್ದೆ ಇರುತ್ತೆ. ಟಿಕೆಟ್ ವ್ಯತ್ಯಾಸದಿಂದ ಪೈಪೋಟಿಯಲ್ಲ. ಮೊದಲಿನಿಂದಲೂ ಆ ಕ್ಷೇತ್ರ ಜಿದ್ದಾಜಿದ್ದಿನ ಕ್ಷೇತ್ರ. ಇನ್ನು ಬಹಳ ಸುತ್ತುಗಳಿನ ಮತ ಎಣಿಕೆ ನಡೆಯಬೇಕಿದೆ ಎಂದು ತಿಳಿಸಿದರು.
ನಮಗೆ ನೂರಕ್ಕೆ ನೂರು ಗೆಲ್ಲುವ ವಿಶ್ವಾಸವಿದೆ. ಉಪಚುನಾವಣೆ ಫಲಿತಾಂಶದಿಂದ ರಾಜಕೀಯ ದೃವಿಕರಣವಾಗುವುದಿಲ್ಲ. ನಂಜನಗೂಡು ಗುಂಡ್ಲುಪೇಟೆ ಉಪಚುನಾವಣೆ ನೋಡಿಲ್ವ ಎಂದರು. ನಟ ಪುನೀತ್ ರಾಜ್ ಕುಮಾರ್ ಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಎಂಬ ಮಾಜಿಸಿಎಂ ಸಿದ್ದರಾಮಯ್ಯ ಟ್ವೀಟ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಪುನೀತ್ ರಾಜ್ ಕುಮಾರ್ ಬಗ್ಗೆ ನಮಗೆ ಅಪಾರ ಗೌರವ ಇದೆ. ಎಲ್ಲವನ್ನು ಪರಿಶೀಲನೆ ಮಾಡುತ್ತೇವೆ. ಸಿದ್ದರಾಮಯ್ಯ ತಮ್ಮ ಪ್ರಸ್ತಾಪ ಸಲ್ಲಿಸಲಿ. ಸರ್ಕಾರ ಸಮಯ ಸಂಧರ್ಭ ನೋಡಿಕೊಂಡು ನಮ್ಮ ಪ್ರಸ್ತಾಪ ಸಿದ್ದಪಡಿಸುತ್ತೇವೆ ಎಂದರು.
ಎಲ್ಲದಕ್ಕೂ ಒಂದು ನಿಯಮ ಪಾಲನೆ ಇರುತ್ತೆ. ಅದರ ಅಡಿಯಲ್ಲಿ ನಾವು ಸಾಗುತ್ತೇವೆ. ಪುನೀತ್ ರಾಜ್ ಕುಮಾರ್ ಎಲ್ಲಾ ಗೌರವಕ್ಕೂ ಅರ್ಹರು. ಅವರಿಗೆ ಇಂತಹ ಪ್ರಶಸ್ತಿ ನೀಡಲು ಸರ್ವ ಸಮ್ಮತ ಒಪ್ಪಿಗೆ ಇದೆ. ನಿಯಮಗಳನ್ನು ಪರಿಶೀಲನೆ ಮಾಡಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.



