ಮನೆಯ ಮೇಲೆ ಗುಂಡಿನ ದಾಳಿ; ಹತ್ಯೆಗೆ ಯತ್ನ

ಚಿಕ್ಕಮಗಳೂರು: ಮನೆಯೊಂದರ ಮೇಲೆ ಬಂದೂಕಿನಿಂದ ಗುಂಡಿನ ದಾಳಿ ನಡೆಸಿ, ಮನೆಯಲ್ಲಿದ್ದವರ ಹತ್ಯೆಗೆ ಯತ್ನ ನಡೆಸಿರುವ ಪಾತಕ ಕೃತ್ಯ ಮಲ್ಲಂದೂರು ಸಮೀಪದ ಹೆಡದಾಳು ಗ್ರಾಮದಲ್ಲಿ ನಡೆದಿದೆ.
ಹೆಡದಾಳು ಗ್ರಾಮದ ಕಾಫಿ ಪ್ಲಾಂಟರ್ ಮಂಜುನಾಥ್ಗೌಡ ಎಂಬುವರ ಮನೆಯ ಮೇಲೆ ಗುಂಡಿನ ದಾಳಿ ನಡೆದಿದೆ. ಪಕ್ಕದ ಕೋಟೆವೂರು ಗ್ರಾಮದ ನಿವಾಸಿ ಕಿರಣ್ ಮತ್ತು ಜತೆಗಾರರು ಸೇರಿ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ.
ಮಂಜುನಾಥ್ ಗೌಡ ಅವರ ಪುತ್ರ ಚೇತನ್ ಗೌಡ ಮತ್ತು ಹೋಮ್ಸ್ಟೇ ನಡೆಸುತ್ತಿದ್ದ ಕಿರಣ್ ನಡುವೆ ಹಣದ ವಿಷಯದಲ್ಲಿ ವೈಮನಸ್ಸು ಉಂಟಾಗಿದ್ದ ಕಾರಣ ರಾತ್ರಿವೇಳೆ ಕಿರಣ್ ತನ್ನ ಜತೆಗಾರರೊಂದಿಗೆ ಹೋಗಿ ಮಂಜುನಾಥ್ ಗೌಡ ಅವರ ಮನೆಯ ಬಳಿ ಗಲಾಟೆ ಮಾಡಿದ್ದಾರೆ. ಈ ವೇಳೆ ಮನೆಮಂದಿ ಬಾಗಿಲು ಹಾಕಿಕೊಂಡಿದ್ದಾಗ ಆರೋಪಿಗಳು ಮನೆಯ ಬಾಗಿಲು ಮತ್ತು ಗೋಡೆಯ ಮೇಲೆ ಬಂದೂಕಿನಿಂದ ಗುಂಡು ಹಾರಿಸಿದ್ದಾರೆ.
ಮಲ್ಲಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಿರಣ್ ಹಾಗೂ ಲೋಹಿತ್ ಎಂಬುವರನ್ನು ಬಂಧಿಸಿದ್ದಾರೆ. ನಾಗೇಶ್ ಗೌಡ ಎಂಬ ಆರೋಪಿ ತಲೆಮರೆಸಿಕೊಂಡಿದ್ದಾನೆ. ಇನ್ನೂ ಕೆಲ ಆರೋಪಿಗಳಿರುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.




