Blue Paddy: ಸಿದ್ಧಾಪುರದಲ್ಲಿ ಕೃಷ್ಣ ನೀಲಿ ಭತ್ತದ ಕೌತುಕ

ಕಾರವಾರ: ಸಿದ್ಧಾಪುರ ತಾಲೂಕಿನ ಸಾಗರ ರಸ್ತೆಯ ಗೋಳಗೋಡು ಗ್ರಾಮದ ಗದ್ದೆ ಬಯಲೀಗ ಅನೇಕರ ಆಸಕ್ತಿಯ ಕೇಂದ್ರವಾಗಿದೆ. ದೃಷ್ಟಿ ಹರಿದಷ್ಟೂ ದೂರ ಹಚ್ಚ ಹಸಿರು ಕಾಣುವ ಮಲೆನಾಡಿನ ಈ ಭತ್ತದ ಗದ್ದೆ ಬಯಲಿಗೆ ಈ ಆಕರ್ಷಣೆ ಹೇಗೆ ಬಂತು ಎಂದರೆ ಈ ಕೌತುಕಕ್ಕೆ ಉತ್ತರ ದೊರೆಯುತ್ತದೆ. ಈ ಭಾಗದ ಜನರ ಲಕ್ಷ್ಯ ತನ್ನತ್ತ ಕೇಂದ್ರೀಕರಿಸುವಂತೆ ಮಾಡಿದ ಹಣಜಿಬೈಲಿನ ದ್ಯಾವಾ ಎಂ.ನಾಯ್ಕ ಅವರ ಸಾಹಸಗಾಥೆಯೇ ಈ ಕೌತುಕದ ಹಿಂದಿನ ಸಾಧನೆ.
ಹಣಜಿಬೈಲಿನ ದ್ಯಾವಾ ನಾಯ್ಕರಿಗೆ ಕಳೆದ ನಾಲ್ಕೈದು ವರ್ಷದ ಹಿಂದೆ ರಸ್ತೆಯ ಪಕ್ಕ ಬಣ್ಣದ ಭತ್ತದ ಗಿಡವೊಂದು ಕಾಣಿಸಿದ್ದೇ ಪ್ರಾರಂಭ. ಹೂವಿನ ಗಿಡವೇನೋ ಎಂದು ಅನುಮಾನದಿಂದಲೇ ಕೊಂಡೊಯ್ದು ಸಾಕಿ ಬೆಳೆಸಿದ ನಾಯ್ಕರಿಗೆ ಅದು ಭತ್ತದ ಗಿಡ ಎಂದು ತಿಳಿಯಲು ಹೆಚ್ಚು ಸಮಯ ಹಿಡಿಯಲಿಲ್ಲ. ಈ ನೀಲಿ ಸಸ್ಯವನ್ನು ನಾಟಿ ಮಾಡಿದ ಭತ್ತದ ಸಸಿಯಿಂದ ನಾಲ್ಕೈದು ತೆನೆ ಭತ್ತ ದೊರೆತ ಖುಷಿಯಲ್ಲಿದ್ದ ದ್ಯಾವಾ ನಾಯ್ಕರಿಗೆ ಈ ಭತ್ತದ ಕದಿರನ್ನು ನವಿಲುಗಳು ಕತ್ತರಿಸಿದಾಗ ಬೇಸರವಾದರೂ ನೆಲಕ್ಕೆ ಬಿದ್ದ ಭತ್ತದಿಂದ ಮಾರನೇ ವರ್ಷ ಕೆಲವು ಸಸಿಗಳನ್ನು ಮಾಡಿ 4 ರಿಂದ 5 ವರ್ಷಗಳಲ್ಲಿ ಈಗ ಹತ್ತು ಗುಂಟೆಗೂ ಹೆಚ್ಚು ಸ್ಥಳದಲ್ಲಿ ಈ ನೀಲಿಭತ್ತವನ್ನು ಬೆಳೆದಿದ್ದಾರೆ.

ಹಚ್ಚ ಹಸಿರಿನ ಭತ್ತದ ಗದ್ದೆಯ ನಡುವೆ ನೀಲಿ ಬಣ್ಣದಿಂದ ಸ್ಥಳೀಯರ ಗಮನ ಸೆಳೆಯುತ್ತಿರುವ ಈ ಕೃಷ್ಣನೀಲಿ ಭತ್ತ ಈಗ ಸಾರ್ವಜನಿಕರ ಕೌತುಕ ಮತ್ತು ಆಕರ್ಷಣೆಯ ಕೇಂದ್ರವಾಗಿದೆ. ಇದು ಕೃಷ್ಣನೀಲ ಎನ್ನುವ ಭತ್ತದ ತಳಿ ಎನ್ನುವ ದ್ಯಾವಾ ನಾಯ್ಕರಿಗೆ ಈ ಭತ್ತದ ವೈಶಿಷ್ಟ್ಯ, ಪ್ರಾಮುಖ್ಯತೆಗಳ ಬಗ್ಗೆ ತಿಳಿದಿಲ್ಲ. ಈ ಭತ್ತದ ಗದ್ದೆ ನೋಡಿದ ಜನರು ಇದು ಉತ್ತಮ ತಳಿ ಇದರಲ್ಲಿ ಔಷಧೀಯ ಗುಣಗಳಿವೆ. ಎಂದು ಹೇಳುತ್ತಾರಾದರೂ ಈ ಬಗ್ಗೆ ಸ್ಫಷ್ಟ ದಾಖಲೆ, ಮಾಹಿತಿ ಇವರ ಬಳಿ ಇಲ್ಲ.
ಈ ಬಗ್ಗೆ ಸ್ಥಳೀಯ ಕೃಷಿ ಇಲಾಖೆಯ ಅಧಿಕಾರಿಗಳನ್ನು ವಿಚಾರಿಸಿದರೆ ಅದು ವಿಶಿಷ್ಟ ತಳಿಯ ಭತ್ತ. ಇದನ್ನು ಕೃಷಿ ವಿಶ್ವವಿದ್ಯಾಲಯಗಳಲ್ಲಿ ಪ್ರಾಯೋಗಿಕವಾಗಿ ಬೆಳೆದಿರುವ ಸಾಧ್ಯತೆ ಇದೆ.ಆದರೆ ಅನಿರೀಕ್ಷಿತವಾಗಿ ದೊರೆತ ಈ ಭತ್ತದ ಗಿಡದಿಂದ ಇಷ್ಟು ದೊಡ್ಡ ಪ್ರಮಾಣದಲ್ಲಿ ಕೃಷ್ಣನೀಲಿ ಭತ್ತ ಬೆಳೆದ ರೈತರ ಸಾಧನೆ ದೊಡ್ಡದು ಎನ್ನುತ್ತಾರೆ.



