ಪಂಜಾಬ್ನಲ್ಲಿ ಗೆಲ್ಲಲು ಸಿಧು 13 ಅಂಶಗಳ ಅಜೆಂಡಾ; ಸೋನಿಯಾ ಗಾಂಧಿಗೆ ಪತ್ರ

ನವದೆಹಲಿ: ಮುಂದಿನ ವರ್ಷ ನಡೆಯಲಿರುವ ಚುನಾವಣೆಯನ್ನು ಗೆಲ್ಲಲು ಪಂಜಾಬ್ನಲ್ಲಿ ಕಾಂಗ್ರೆಸ್ ಇಡಬೇಕಾದ ಹೆಜ್ಜೆಗಳ ಬಗ್ಗೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು 13 ಅಂಶಗಳ ಅಜೆಂಡಾವನ್ನು ಮುಂದಿಟ್ಟು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ.
ಈಗಾಗಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೆಣುಗೋಪಾಲ್ ಅವರನ್ನು ಭೇಟಿಯಾಗಿ, ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನೀಡಿದ್ದ ರಾಜೀನಾಂಎ ವಾಪಸ್ ಪಡೆದಿದ್ದ ನವಜೋತ್ ಸಿಂಗ್ ಸಿಧು, ಅದಾದ ಒಂದು ದಿನದ ಬಳಿಕ ಸೋನಿಯಾ ಗಾಂಧಿ ಅವರಿಗೆ ಈ ಪತ್ರ ಬರೆದಿದ್ದಾರೆ.
ಪಂಜಾಬ್ ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿ 13 ಅಂಶಗಳ ಅಜೆಂಡಾ ಚರ್ಚಿಸಲು ಸಭೆ ಕರೆಯುವಂತೆ ಅವರು ಪತ್ರದಲ್ಲಿ ಕೋರಿದ್ದಾರೆ.
ಶುಕ್ರವಾರ ಬರೆದಿರುವ ಈ ಪತ್ರವನ್ನು ಅವರಿಂದು ಟ್ವಿಟರ್ನಲ್ಲಿ ಬಹಿರಂಗಪಡಿಸಿದ್ದಾರೆ.
ಪಂಜಾಬ್ನಲ್ಲಿನ ಡ್ರಗ್ಸ್ ಸಮಸ್ಯೆ, ಕೃಷಿ ಸಮಸ್ಯೆಗಳು, ಉದ್ಯೋಗಾವಕಾಶಗಳು, ಮರಳುಗಾರಿಕೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇವು ಸಿಧು ಪ್ರಸ್ತಾಪಿಸಿರುವ 13 ಅಂಶಗಳಲ್ಲಿ ಪ್ರಮುಖವಾದವುಗಳಾಗಿವೆ.
