RSS ಸಂಘಟನೆ ಇಲ್ಲದಿದ್ದರೆ ಇಷ್ಟೋತ್ತಿಗೆ ದೇಶದಲ್ಲಿ ನಾಲ್ಕೈದು ಪಾಕಿಸ್ತಾನ ನಿರ್ಮಾಣ ಆಗುತ್ತಿದ್ದವು: ಜಗದೀಶ್ ಶೆಟ್ಟರ್

ಹುಬ್ಬಳ್ಳಿ : ಆರ್ ಎಸ್ ಎಸ್ ಸಂಘಟನೆ ಬಗ್ಗೆ ಟೀಕೆ ಮಾಡೋದು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಕ್ಕೆ ಇತ್ತೀಚೆಗೆ ಒಂದು ಫ್ಯಾಷನ್ ಆಗಿದೆ. ರಾಷ್ಟೀಯ ಸ್ವಯಂ ಸೇವಕರ ಸಂಘ ನೂರು ವರ್ಷದ ಇತಿಹಾಸ ಹೊಂದಿದೆ. ದೇಶದ ಇತಿಹಾಸ ಮತ್ತು ಪರಂಪರೆಯನ್ನ ಉಳಿಸಿಕೊಂಡು ಬಂದಿರುವಂತ ಸಂಘಟನೆ ಆರ್ ಎಸ್ ಎಸ್ ಆಗಿದೆ. ಅಕಸ್ಮಾತ್ ಭಾರತದಲ್ಲಿ RSS ಇರದೇ ಇದ್ದಲ್ಲಿ ಇಷ್ಟೋತ್ತಿಗೆ ದೇಶದಲ್ಲಿ ನಾಲ್ಕೈದು ಪಾಕಿಸ್ತಾನ ನಿರ್ಮಾಣ ಆಗುತ್ತಿದ್ದವು ಎನ್ನುವ ಮೂಲಕ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚಿಗೆ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯನವರಿಗೆ RSS ಮೇಲೆ ಲವ್ ಆಗಿದೆ ಅಂಥಾ ಕಾಣಿಸುತ್ತೆ, ಅದಕ್ಕಾಗಿಯೇ ಪದೇಪದೇ ನೆನಪು ಮಾಡ್ಕೋತಿದಾರೆ. ರಾಷ್ಟೀಯ ಸ್ವಯಂ ಸೇವಕರ ಸಂಘ ತನ್ನದೆಯಾದ ಇತಿಹಾಸ ಹೊಂದಿದೆ. ದೇಶದ ಇತಿಹಾಸ ಮತ್ತು ಪರಂಪರೆಯನ್ನ ಉಳಿಸಿಕೊಂಡು ಬರುವುದರಲ್ಲಿ ಮಹತ್ವದ ಪಾತ್ರವಹಿಸುತ್ತಾ ಬಂದಿದೆ. ದೇಶದ ಒಗ್ಗಟ್ಟು, ಏಕತೆ ಸೌಹಾರ್ದತೆ ಸಾರುವಲ್ಲಿ RSS ಪಾತ್ರ ಪ್ರಮುಖವಾಗಿದೆ ಎಂದರು.
ಅಲ್ಪ ಸಂಖ್ಯಾತರ ಓಲೈಕೆಗೆ RSS ಟೀಕಿಸುವುದು ಸರಿಯಲ್ಲ:
ಜೆಡಿಎಸ್ ಕಾಂಗ್ರೆಸ್ ಬದಲಾಗಿರಬಹುದು ಆದರೆ ರಾಷ್ಟೀಯ ಸ್ವಯಂ ಸೇವಕರ ಸಂಘ ಯಾವತ್ತು ಬದಲಾಗಿಲ್ಲ. ಅದರ ನಿಲುವು ಯಾವತ್ತಿದ್ರೂ ಒಂದೇ ಆಗಿದೆ. ದೇಶ ಸಂರಕ್ಷಿಸುವ ನಿಟ್ಟಿನಲ್ಲಿ 1925 ರಲ್ಲಿ ಸ್ಥಾಪಿತವಾಗಿರುವ ಸಂಸ್ಥೆ ಇಂದಿಗೂ ಅದೇ ವಿಚಾರಧಾರೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಇಂದು ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಅಲ್ಪ ಸಂಖ್ಯಾತರ ಮತ ಓಲೈಕೆಗೆ ಈ ರೀತಿ ಹೇಳಿಕೆಗೆ ನೀಡುತ್ತಿದ್ದಾರೆ. ಬರೀ ಮತ ಓಲೈಕೆಗೆ ರಾಷ್ಟೀಯ ಸ್ವಯಂ ಸೇವಕ ಸಂಘವನ್ನು ಈ ರೀತಿ ಟಿಕೀಸುವುದು ಸರಿಯಿಲ್ಲ. ಹೀಗೆ ಮಾಡುವದರಿಂದ RSS ಗೆ ಯಾವುದೇ ನಷ್ಟ ಇಲ್ಲಾ ಎಂದು RSS ಬಗ್ಗೆ ಟಿಕೀಸುವವರ ವಿರುದ್ದ ಹರಿಹಾಯ್ದರು.
ಉಪಚುನಾವಣೆಯಲ್ಲಿ ಜೆಡಿಎಸ್ ಪಕ್ಷವೂ ಕಾಂಗ್ರೆಸ್ ಪಕ್ಷವನ್ನು ಟಾರ್ಗೆಟ್ ಮಾಡಿ ಅಲ್ಪ ಸಂಖ್ಯಾತ ಅಭ್ಯರ್ಥಿಗಳನ್ನ ಕಣಕ್ಕಿಳಿಸಿದೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಅದೂ ಕಾಂಗ್ರೆಸ್ ಜೆಡಿಎಸ್ ಹಣೆಬರಹ. ಅದರ ಬಗ್ಗೆ ನಾನೇನು ಮಾತನಾಡಲು ಹೋಗಲ್ಲ. ನಮಗೆ ನಮ್ಮದೇ ಆದ ವೋಟ್ ಬ್ಯಾಂಕ್ ಇದೆ. ನಮ್ಮ ಪ್ರಧಾನಿ ನರೇಂದ್ರ ಮೋದಿ ಸಾಧನೆ ಹಾಗೂ ರಾಜ್ಯ ಸರ್ಕಾರದ ಸಾಧನೆ ಮುಂದೆ ಇಟ್ಟುಕೊಂಡು ಚುನಾವಣೆ ಎದುರುಸುತ್ತೇವೆ. ಎರಡೂ ಕ್ಷೇತ್ರದಲ್ಲಿ ನಮ್ಮ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಯಡಿಯೂರಪ್ಪ ಆಪ್ತನ ಮೇಲೆ ಐಟಿ ರೇಡ್ ಕುರಿತು ಪ್ರತಿಕ್ರಿಯಿಸಿ, ಯಡಿಯೂರಪ್ಪನವರೇ ದಾಳಿ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಕಾನೂನು ರೀತಿ ಏನೂ ಆಗಬೇಕು ಅದೂ ಆಗುತ್ತೆ. ಅದರಲ್ಲಿ ಯಾವುದೇ ರಾಜಕೀಯ ಇಲ್ಲಾ. ಸಿದ್ದರಾಮಯ್ಯ ಬಿಜೆಪಿ ಪಕ್ಷದಲ್ಲಿ ಲೂಟರ್ಸ್ ಇದ್ದಾರೆ ಎಂಬ ಕುರಿತು ಮಾತನಾಡಿ, ಹೀಗೆ ಮಾತನಾಡುವದರಿಂದ ಅವರ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ. ಹಿಂತಹ ಹೇಳಿಕೆಗಳಿಂದ ನಮಗೇನು ನಷ್ಟ ಇಲ್ಲಾ ಅದೂ ಅವರ ಪಕ್ಷಕ್ಕೆ ನಷ್ಟ ವಾಗಲಿದೆ ಎಂದು ಪ್ರತಿಕ್ರಿಯೆ ನೀಡಿದರು.




