ಕಾಂಗ್ರೆಸ್ನಿಂದ ಪ್ರಶಾಂತ್ ಕಿಶೋರ್ ದೂರ?; ಅನುಮಾನ ಮೂಡಿಸಿದ ಟ್ವೀಟ್

ನವದೆಹಲಿ: ಚುನಾವಣಾ ತಂತ್ರ ಪರಿಣಿತ ಪ್ರಶಾಂತ್ ಕಿಶೋರ್ ಕಾಂಗ್ರೆಸ್ಗೆ ಬೆನ್ನು ಹಾಕಿದ್ದಾರೆಯೇ ಎಂದು ಅನುಮಾನ ಹುಟ್ಟುವುದಕ್ಕೆ ಶುಕ್ರವಾರ ಬೆಳಗ್ಗೆ ಅವರು ಮಾಡಿರುವ ಟ್ವೀಟ್ ಕಾರಣವಾಗಿದೆ.
ಲಖೀಂಪುರ ಖೇರಿ ಹಿಂಸಾಚಾರದ ವಿಚಾರದಲ್ಲಿ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷ ಕೂಟ ಬಹಳ ಬೇಗ ಮರುಹುಟ್ಟು ಪಡೆಯಲಿದೆ ಎಂಬ ನಿರೀಕ್ಷೆ ಹುಸಿಯಾಗುತ್ತಿದೆ ಎಂಬ ಅವರ ಮಾತು ಇಂಥ ಅನುಮಾನ ಮೂಡಿಸಿದೆ.
ಲಖೀಂಪುರ ಘಟನೆಯ ಸಂದರ್ಭದಲ್ಲಾದರೂ ಹಳೆಯ ಪಕ್ಷದ ಮುಂದಾಳತ್ವದ ಪ್ರತಿಪಕ್ಷ ಕೂಟದ ಬಗ್ಗೆ ನಿರೀಕ್ಷ ಇಟ್ಟುಕೊಂಡಿದ್ದವರಿಗೆ ಭ್ರಮನಿರಸನವಾಗಿದೆ. ಕಾಂಗ್ರೆಸ್ನೊಳಗೆ ಆಳವಾಗಿರುವ ಹಲವು ಸಮಸ್ಯೆಗಳನ್ನು ಅಷ್ಟೇ ತ್ವರಿತವಾಗಿ ಸರಿಪಡಿಸುವುದು ಆಗುತ್ತಿಲ್ಲ. ಕಾಂಗ್ರೆಸ್ನ ಒಟ್ಟು ಸ್ವರೂಪವೇ ದುರ್ಬಲವಾಗಿದೆ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರಲಿದ್ದಾರೆ ಎಂಬ ವದಂತಿಗಳು ಕೆಲ ದಿನಗಳ ಹಿಂದೆ ಹಬ್ಬಿದ್ದವು. ಅದಕ್ಕೆ ಪೂರಕವೆನ್ನುವಂತೆ, ಅವರು ಸೋನಿಯಾ, ರಾಹುಲ್ ಮತ್ತು ಪ್ರಿಯಾಂಕ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು ಕೂಡ ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿತ್ತು.
