ಮಾಹಿತಿ ನೀಡಿಲ್ಲವೆಂಬ ಕಾರಣಕ್ಕೆ ಪಿಡಿಒ ಮೇಲೆ ಹಲ್ಲೆ

ಚಿಕ್ಕಮಗಳೂರು: ಮಾಹಿತಿ ಹಕ್ಕು ಅಧಿನಿಯಮದಡಿ ಮಾಹಿತಿ ನೀಡಿಲ್ಲವೆಂಬ ಕಾರಣಕ್ಕೆ ದೊಡ್ಡಮಾಗರವಳ್ಳಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಆರೋಪಿಗಳ ವಿರುದ್ಧ ಕಠಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಯೋಗೀಶ್ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರಿಗೆ ಮನವಿ ಸಲ್ಲಿಸಿದರು.
ಪಿಡಿಒ ಸಂಶುಲ್ ನಹರ್ ಎಂಬುವರ ಮೇಲೆ ಗ್ರಾಪಂ ಸದಸ್ಯರಾದ ಎಂಎನ್ ಮೇಘ, ಕೃಷ್ಣೇಗೌಡ, ಸಿ.ಸಿ.ಗೌತಮ್, ಎಚ್.ಆರ್ ರಾಕೇಶ್ ಎಂಬವರು ಮಾಹಿತಿ ಹಕ್ಕು ಅಧಿನಿಯಮದಡಿ ಮಾಹಿತಿ ನೀಡಿಲ್ಲವೆಂಬ ಕಾರಣಕ್ಕೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಅಲ್ಲದೆ ಧರ್ಮದ ವಿಷಯದಲ್ಲಿ ಅವಹೇಳನವಾಗಿ ಮಾತನಾಡಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಕೋವಿಡ್ ಹತೋಟಿಗೆ ಗ್ರಾಪಂ ಮಟ್ಟದಲ್ಲಿ ಟಾಸ್ಕ್ಫೋರ್ಸ್ ಸಮಿತಿ ನೇಮಿಸಿದ್ದು, ಈ ಕರ್ತವ್ಯದಲ್ಲಿದ್ದ ಪಿಡಿಒ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು. ಗ್ರಾಪಂ ಸದಸ್ಯರ ಸದಸ್ಯತ್ವ ರದ್ದುಪಡಿಸಬೇಕು. ಕೋವಿಡ್ ನಿಯಮಗಳನ್ನು ಬಿಗಿಗೊಳಿಸುವಾಗ ಗ್ರಾಪಂ ಅಧಿಕಾರಿಗಳಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.




