ಸುಳ್ಳು ಹೇಳುವುದರಲ್ಲಿ ಸಿದ್ದರಾಮಯ್ಯನವರು ನಿಸ್ಸೀಮರು: ಮಾಜಿ ಸಿಎಂ ಜಗದೀಶ್ ಶೆಟ್ಟರ್

ಧಾರವಾಡ: 2013ರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯವರ ನೇತೃತ್ವದ ಕಾಂಗ್ರೆಸ್ ಸರ್ಕಾರ ನಡೆಸಿದ ಜಾತಿಗಣತಿ ವರದಿಯು 2015 ರಲ್ಲಿಯೇ ಸಿದ್ಧವಾಗಿದೆ. ಆದರೆ ಅಂದು ಜಾತಿಗಣತಿ ವರದಿ ಬಹಿರಂಗ ಮಾಡದಂತೆ ಸಿದ್ದರಾಯ್ಯನವರೇ ಹಿಂದುಳಿದ ಆಯೋಗವನ್ನು ತಡೆದು ಹಾಕಿದ್ದರು. ಈಗ ಅದೇ ಜಾತಿಗಣತಿಯನ್ನು ಬಹಿರಂಗ ಮಾಡುವಂತೆ ಹೇಳಿಕೆಯನ್ನು ನೀಡುತ್ತಿದ್ದಾರೆ. ಸಿದ್ದರಾಮಯ್ಯನವರ ಈ ನಡೆಯನ್ನು ಗಮನಿಸಿದ್ರೆ, ಅವರು ಸುಳ್ಳು ಹೇಳುವುದರಲ್ಲಿ ಎಷ್ಟು ನಿಸ್ಸೀಮರಿದ್ದಾರೆ ಎನ್ನುವುದನ್ನು ತೋರಿಸಿಕೊಡುತ್ತದೆ ಎಂದು ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದರು.
ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂಧಿಗೆ ಮಾತನಾಡಿದ ಅವರು, ಅವರದೇ ಪಕ್ಷದ ನಾಯಕರಾಗಿರುವ ಮುಖ್ಯಮಂತ್ರಿ ಚಂದ್ರು ಅವರು, ವರದಿ ಬಿಡುಗಡೆ ಮಾಡುವಂತೆ ಕೋರಿ ಹೈಕೋರ್ಟ್ ಗೆ ಸಲ್ಲಿಸಿದ ರಿಟ್ ಪಿಟಿಶನ್‌ದಲ್ಲಿ ವರದಿ ಸಿದ್ದವಾಗಿರುವ ದಿನಾಂಕವನ್ನು ಉಲ್ಲೇಖಿಸಿದ್ದಾರೆ. ಅಂದರೆ ಸಿದ್ದರಾಮಯ್ಯ ಅವರು ಸಿಎಂ ಇದ್ದ ಅವಧಿಯಲ್ಲಿ ವರದಿ ಸಿದ್ಧಗೊಂಡಿದೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಆದರೆ ಅಂದೇ ಅವರು ಯಾಕೆ ವರದಿಯನ್ನು ಬಿಡುಗಡೆ ಮಾಡಲಿಲ್ಲ ಎಂದು ಪ್ರಶ್ನೆ ಮಾಡಿದರು.
ಅವರ ಅಧಿಕಾರ ಅವಧಿಯಲ್ಲಿಯೇ ಸಿದ್ದಗೊಂಡ ವರದಿಯನ್ನು ಬಿಡುಗಡೆ ಮಾಡಲು ಹೊರಟ್ಟಿದ್ದ ಸಿದ್ದರಾಮಯ್ಯನವರಿಗೆ, ಅಂದು ಅವರದೇ ಪಕ್ಷದವರು ತೀವ್ರ ವಿರೋಧ ವ್ಯಕ್ತಪಡಿಸಿದರು. ಆಗ ಸಿದ್ದರಾಮಯ್ಯನವರು ಹಿಂದುಳಿದ ಆಯೋಗಕ್ಕೆ ವರದಿ ಬಹಿರಂಗ ಮಾಡದಂತೆ ಸೂಚಿಸಿದರು. ಬಳಿಕ ಕೆಲವು ದಿನಗಳನಂತರ ಬೇರೆ ನೇರೆ ಮೂಲಗಳಿಂದ ಮಾಧ್ಯಮಗಳು ಅಂಕಿ ಅಂಶ ಸಮೇತ ಸುದ್ದಿ ಬಿತ್ತರಿಸಿದವು. ಆಗ ಇದೇ ಸಿದ್ದರಾಮಯ್ಯನವರು ಅದನ್ನು ತಳ್ಳಿಹಾಕಿದರು. ಜಾತಿಗಣತಿ ವಿಚಾರದಲ್ಲಿ ವರದಿಯೇ ಸಿದ್ಧವಾಗಿಲ್ಲ ಎಂದು ಸಿದ್ದರಾಮಯ್ಯನವರು ಹಸಿ ಸುಳ್ಳನ್ನು ಹೇಳುತ್ತಲ್ಲೇ ಬಂದಿದ್ದಾರೆ. ಈಗ ಹಿಂದುಳಿದ ವರ್ಗದ ಚಾಂಪಿಯನ್ ಆಗಲು ಹೊರಟಿದ್ದು, ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಅವರದ್ದು ಬೇಜವಾವ್ದಾರಿಯ ಪರಮಾವಧಿ ಎಂದು ಟೀಕಿಸಿದರು.
ಸಿದ್ದರಾಮಯ್ಯನವರ ಅಧಿಕಾರವಧಿಯಲ್ಲಿ ಜಾತಿಗಣತಿ ವರದಿ ಸಿದ್ಧವಾದರು ಸಹ ಇನ್ನೂ ಸಿದ್ಧವಾಗಿಲ್ಲ ಎಂದು ಅವರು ಹೇಳಿಕೊಂಡು ಬಂದರು. ಬಳಿಕ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರದಲ್ಲಿಯು ವರದಿ ಬಿಡುಗಡೆಗೆ ಅವಕಾಶವಿತ್ತು, ಆದರೆ ಅಲ್ಲಿಯು ಅದರ ಬಿಡುಗಡೆಗೆ ಸಿದ್ದರಾಮಯ್ಯನವರು ಧ್ವನಿಯನ್ನು ಎತ್ತಲಿಲ್ಲ. ಈಗ ಟ್ವೀಟ್ ಮೂಲಕ ಕುಮಾರಸ್ವಾಮಿಯ ಮೇಲೆ ಗೂಬೆ ಕುರಿಸುವ ಕೆಲಸವನ್ನು ಸಿದ್ದರಾಮಯ್ಯನವರು ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.




