ದಲಿತರ ಸವಲತ್ತುಗಳಿಗೆ ಮೊಗವೀರರಿಂದ ಕತ್ತರಿ: ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಶ್ರೀನಿವಾಸ್ ಕಿಡಿ

ಕಾರವಾರ : ದಲಿತರ ಸವಲತ್ತುಗಳನ್ನು ಇಂದು ಮೊಗವೀರರು ಜಾತಿ ಪ್ರಮಾಣ ಪತ್ರ ಪಡೆದು ನಿಜವಾದ ದಲಿತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಶ್ರೀನಿವಾಸ್ ಆರೋಪಿಸಿದ್ದಾರೆ. ಅವರು ಇಂದು ಕಾರವಾರದ ಜಿಲ್ಲಾ ಪತ್ರಿಕಾಭವನಲ್ಲಿ ಕರೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಮೊಗವೀರರು ಪ್ರತಿಯೊಂದು ಕ್ಷೇತ್ರದಲ್ಲಿಯೂ ದಲಿತರ ಮೀಸಲಾತಿಯನ್ನು ಅನ್ಯಾಯವಾಗಿ ಪಡೆದುಕೊಳ್ಳುತ್ತಿದ್ದಾರೆ. ಅದರಲ್ಲೂ ಪ್ರಮುಖವಾಗಿ ತಾಲೂಕಾ ಪಂಚಾಯತ್ ಸೇರಿದಂತೆ ರಾಜಕೀಯ ಮೀಸಲಾತಿಯಲ್ಲಿಯೂ ಮೊಗವೀರರು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದುಕೊಳ್ಳುವ ಮೂಲಕ ಮೂಲ ದಲಿತರಿಗೆ ಅನ್ಯಾಯ ಮಾಡುತ್ತಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರಕಾರದ ಯೋಜನೆಗಳಲ್ಲಿಯೂ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಯವರಿಗೂ ಸರಕಾರದ ಯೋಜನೆಯ ಲಾಭ ಸರಿಯಾಗಿ ಸಿಗುತ್ತಿಲ್ಲ. ಈ ಬಗ್ಗೆ ಸರಕಾರಕ್ಕೂ ಮನವಿ ಸಲ್ಲಿಸಿದ್ದೇವೆ.
ಈಗಾಗಲೇ ಸರಕಾರದಿಂದ ದಲಿತ ವರ್ಗಕ್ಕೆ ಸೇರಿದ ಗುತ್ತಿಗೆದಾರರಿಗಾಗಿ ಉತ್ತರ ಕನ್ನಡ ಜಿಲ್ಲೆಗೆ 9 ಕೋಟಿ ಹಣ ಬಿಡುಗಡೆ ಮಾಡಿದ್ದು,ಮೊದಲ ಹಂತವಾಗಿ 4 ಕೋಟಿ ಬಿಡುಗಡೆಯಾಗಿದೆ. 2017 ರಲ್ಲಿ ದಲಿತ ವರ್ಗಕ್ಕೆ ಟೆಂಡರ್ ಇಲ್ಲದೆ 50 ಸಾವಿರ ಕಾಮಗಾರಿಯನ್ನ ನೀಡಬೇಕು ಎಂದು ಸರಕಾರದ ಆದೇಶ ಹೊರಡಿಸಿದೆ.ಅದು ಸಹ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಟೆಂಡರ್ ಗಳಲ್ಲಿ ದಲಿತರಿಗೆ ಅವಕಾಶ ನೀಡುವಂತೆ ಈಗಾಗಲೇ ಸರಕಾರಕ್ಕೆ ಮನವಿಯನ್ನು ಸಲ್ಲಿಸಲಾಗಿದೆ. ಮುಂದಿನ ದಿನದಲ್ಲಿ ಈ ಅನುದಾನವನ್ನು ಒಂದು ಕೋಟಿಗೆ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿದರು.
ಇನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ಗುತ್ತಿಗೆದಾರರು ಮಾಡಿರುವ ಕಾಮಗಾರಿ ಹಣವನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಈ ಬಗ್ಗೆ ನಗರಸಭೆ ಆಯುಕ್ತರಿಗೆ ದೂರು ನೀಡಲಿದ್ದೇವೆ. ಆದಷ್ಟು ಶೀಘ್ರದಲ್ಲಿ ಕಾಮಗಾರಿ ಹಣವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.




