
ಬೆಂಗಳೂರು : ವಿಕೃತಕಾಮಿ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ಖಾಯಂಗೊಳಿಸಿ ಇಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ.
ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಮಾರ್ಪಡಿಸುವಂತೆ ಹೈಕೋರ್ಟ್ಗೆ ಉಮೇಶ್ ರೆಡ್ಡಿ ವಕೀಲರ ಮೂಲಕ ಅರ್ಜಿ ಸಲ್ಲಿಸಿದ್ದರು. 10 ವರ್ಷಗಳಿಂದ ಒಂಟಿಯಾಗೆ ಜೈಲಿನಲ್ಲಿ ಸೆರೆಯಲ್ಲಿಡಲಾಗಿದೆ. ಕ್ಷಮಾದಾನ ಅರ್ಜಿ ಇತ್ಯರ್ಥ ವಿಳಂಬಿಸಲಾಗಿದೆ. ಇದರಿಂದ ಮಾನಸಿಕ ಯಾತನೆ ಅನುಭವಿಸಿದ್ದೇನೆ ಎಂದು ಉಮೇಶ್ ರೆಡ್ಡಿ ವಕೀಲರ ಮೂಲಕ ವಾದ ಮಂಡಿಸಿದ್ದನು.
ಫೆಬ್ರವರಿ 28, 1998 ರಂದು ಜಯಶ್ರೀ ಎಂಬ ಮಹಿಳೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ 2007 ರಲ್ಲಿ ಬೆಂಗಳೂರಿನ ಸೆಷನ್ಸ್ ಕೋರ್ಟ್ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಇದಲ್ಲದೇ ಹಲವು ಅತ್ಯಾಚಾರ ಕೊಲೆ ಪ್ರಕರಣಗಳಲ್ಲಿ ಉಮೇಶ್ ರೆಡ್ಡಿ ಆರೋಪಿಯಾಗಿದ್ದ. 6 ಬಾರಿ ಪೊಲೀಸರ ಬಂಧನದಿಂದ ತಪ್ಪಿಸಿಕೊಂಡಿದ್ದ. ಮೊದಲಿಗೆ ಪೊಲೀಸ್ ಕೆಲಸದಲ್ಲಿದ್ದು ಸೇವೆಯಿಂದ ವಜಾಗೊಂಡಿದ್ದ ಚಿತ್ರದುರ್ಗ ಮೂಲದ ಉಮೇಶ್ ರೆಡ್ಡಿ ಜೈಲಿನಲ್ಲಿ ಬೆತ್ತಲಾಗಿ ತಿರುಗುತ್ತಿದ್ದ ಎಂದು ಸಹ ವರದಿಯಾಗಿತ್ತು. ಹೈಕೋರ್ಟ್ ಅರ್ಜಿಯ ವಿರುದ್ಧ ಮೇಲ್ಮನವಿಯಲ್ಲಿ ಸುಪ್ರೀಂ ಕೋರ್ಟ್ ಗಲ್ಲು ಶಿಕ್ಷೆ ಎತ್ತಿ ಹಿಡಿದಿತ್ತು.
ಕ್ಷಮಾದಾನ ಕೋರಿ ರಾಷ್ಟ್ರಪತಿಗೆ ಉಮೇಶ್ ರೆಡ್ಡಿ ತಾಯಿ ಸಲ್ಲಿಸಿದ್ದ ಅರ್ಜಿ 2013 ರಲ್ಲಿ ತಿರಸ್ಕರಿಸಲ್ಪಟ್ಟಿತ್ತು. ತದನಂತರ ಗಲ್ಲು ಶಿಕ್ಷೆ ಜೀವಾವಧಿಯಾಗಿ ಮಾರ್ಪಡಿಸಲು ಉಮೇಶ್ ರೆಡ್ಡಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ.



