Siddaramaiah: ನಾಳೆ ದಾವಣಗೆರೆಗೆ ಸಿದ್ದರಾಮಯ್ಯ: ಅಹಿಂದ ಸಂಘಟನೆಯತ್ತ ಮಾಜಿ ಸಿಎಂ ಚಿತ್ತ…?

ದಾವಣಗೆರೆ: ನಾಳೆ ಮಾಜಿ ಸಿಎಂ ಸಿದ್ದರಾಮಯ್ಯ ದಾವಣಗೆರೆಗೆ ಆಗಮಿಸುತ್ತಿದ್ದಾರೆ. ಈ ಭೇಟಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಎಡೆಬಿಡದೇ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿರುವ ಸಿದ್ದರಾಮಯ್ಯ ಇಲ್ಲಿಂದಲೇ ಮತ್ತೊಂದು “ಅಹಿಂದ” ಹೋರಾಟಕ್ಕೆ ಸಜ್ಜಾಗುತ್ತಿದ್ದಾರಾ ಎಂಬ ಅನುಮಾನಕ್ಕೆ ಕಾರಣವಾಗಿದೆ.
ದಾವಣಗೆರೆ ರಾಜಕಾರಣಿಗಳ ಪಾಲಿಗೆ ಒಳ್ಳೆಯ ತಾಣ ಎಂಬ ನಂಬಿಕೆ ಇದೆ. ಬಿಜೆಪಿಯು ಈ ಹಿನ್ನೆಲೆಯಲ್ಲಿ ರಾಜ್ಯ ಕಾರ್ಯಕಾರಿಣಿಯನ್ನು ಇಲ್ಲೇ ನಡೆಸಿತ್ತು. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರೂ ಸಹ ಇಲ್ಲಿಂದಲೇ ಮತ್ತೊಂದು ” ಅಹಿಂದ” ಹೋರಾಟಕ್ಕೆ ಸಜ್ಜಾಗುತ್ತಾರಾ ಎಂಬ ಅನುಮಾನ ಶುರುವಾಗಿದೆ. ಯಾಕೆಂದರೆ ಕುರುಬ ಸಮುದಾಯದ ಕಾರ್ಯಕ್ರಮ, ಪ್ರತಿಭಟನೆ ಸೇರಿದಂತೆ ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ನಾಳೆ ಬೆಳಿಗ್ಗೆ 11 ಗಂಟೆಗೆ ಆಗಮಿಸಲಿರುವ ಸಿದ್ದರಾಮಯ್ಯ ಅವರು, ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಮಾಜಿ ಸಚಿವರಾದ ಡಾ. ಶಾಮನೂರು ಶಿವಶಂಕರಪ್ಪ, ಎಸ್. ಎಸ್. ಮಲ್ಲಿಕಾರ್ಜುನ್ ಅವರ ನೇತೃತ್ವದಲ್ಲಿ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಪಕ್ಷ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಈ ಪ್ರತಿಭಟನೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪನವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಜಿಲ್ಲೆಯ ಮಾಜಿ ಸಚಿವರು, ಹಾಲಿ, ಮಾಜಿ ಶಾಸಕರು ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು, ಪಕ್ಷದ ಕಾರ್ಯಕರ್ತರುಗಳು ಭಾಗವಹಿಸಲಿದ್ದಾರೆ.
ಬೆಳಿಗ್ಗೆ 11.30ಕ್ಕೆ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಮತ್ತು ಮಾಜಿ ಮುಖ್ಯಮಂತ್ರಿಗಳಾದ ಹಿಂದುಳಿದ ವರ್ಗಗಳ ಹರಿಕಾರ ಡಿ. ದೇವರಾಜ ಅರಸು ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಿರುವ ಸಿದ್ದರಾಮಯ್ಯ ಅವರು, ನಂತರ ಆರಂಭಗೊಳ್ಳುವ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬಳಿಕ ಜಿಲ್ಲಾಧಿಕಾರಿಗಳ ಕಛೇರಿಯವರೆಗೆ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಒಟ್ಟಿನಲ್ಲಿ ಸಿದ್ದರಾಮಯ್ಯರ ಭೇಟಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.



