
ಬೆಂಗಳೂರು: ಶಾಸಕರ ನಿಧನದಿಂದಾಗಿ ಕಳೆದ ಹಲವು ತಿಂಗಳುಗಳಿಂದ ತೆರವಾಗಿದ್ದ ಎರಡು ಕ್ಷೇತ್ರಗಳಿಗೆ ಉಪಚುನಾವಣೆ ದಿನ ಘೋಷಣೆಯಾಗಿದ್ದು, ಎರಡೂ ಕ್ಷೇತ್ರಗಳನ್ನು ಗೆಲ್ಲುವುದು ಸಿಎಂ ಬಸವರಾಜ ಬೊಮ್ಮಾಯಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಚುನಾವಣೆ ಎದುರಿಸಲು ಯಡಿಯೂರಪ್ಪನವರ ಮೇಲೆಯೇ ಅವಲಂಬಿತವಾಗುತ್ತಿದ್ದ ರಾಜ್ಯ ಬಿಜೆಪಿಯ ಮುಂದೆಯೂ ಇಲ್ಲಿಂದ ಹೊಸ ಸವಾಲು ಶುರುವಾಗಲಿದೆ.
ಹಾನಗಲ್ ಮತ್ತು ಸಿಂಧಗಿ ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 30ರಂದು ಉಪಚುನಾವಣೆ ನಡೆಯಲಿದೆ. ಮೊದಲನೆಯದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆ ಹಾವೇರಿಯ ಕ್ಷೇತ್ರವಾದರೆ, ಸಿಂಧಗಿ ವಿಜಯಪುರ ಜಿಲ್ಲೆಗೆ ಸೇರಿರುವ ಕ್ಷೇತ್ರ. ಹಾನಗಲ್, ಸಿಎಂ ಬೊಮ್ಮಾಯಿ ಅವರ ಮಾರ್ಗದರ್ಶಕನಂತೆಯೂ ಇದ್ದ ಬಿಜೆಪಿಯ ಹಿರಿಯ ನಾಯಕ ಸಿ ಎಂ ಉದಾಸಿ ನಿಧನದಿಂದ ತೆರವಾಗಿತ್ತು. ಇನ್ನೊಂದೆಡೆ, ಜೆಡಿಎಸ್ ಹಿರಿಯ ನಾಯಕ ಎಂ ಸಿ ಮನಗೂಳಿ ನಿಧನದಿಂದ ಸಿಂಧಗಿಯಲ್ಲಿ ಉಪಚುನಾವಣೆ ನಡೆಯಬೇಕಾದ ಅನಿವಾರ್ಯತೆ ತಲೆದೋರಿತ್ತು.
ಹಾನಗಲ್, ಲಿಂಗಾಯತ ಪ್ರಾಬಲ್ಯದ ಹಾಗೂ ಈಗಾಗಲೇ ಬಿಜೆಪಿಯ ಪ್ರಾತಿನಿಧ್ಯವಿದ್ದ ಕ್ಷೇತ್ರ. ಅಲ್ಲಿ ಯಡಿಯೂರಪ್ಪನವರ ಕಿರಿಯ ಪುತ್ರ ಬಿವೈ ವಿಜಯೇಂದ್ರ ಬಿಜೆಪಿ ಅಭ್ಯರ್ಥಿಯಾಗುತ್ತಾರೆಂಬ ಮಾತು ಕೇಳಿಬರುತ್ತಿದ್ದರೂ, ಅದಿನ್ನೂ ಖಚಿತವಿಲ್ಲ. ಉದಾಸಿಯವರ ಸೊಸೆಯನ್ನು ಕಣಕ್ಕಿಳಿಸುವ ಚಿಂತನೆ ಕೂಡ ನಡೆದಿದೆ ಎನ್ನಲಾಗಿದೆ. ಹಾವೇರಿ ಸಂಸದ ಹಾಗೂ ಉದಾಸಿಯವರ ಮಗ ಶಿವಕುಮಾರ ಉದಾಸಿ ಪತ್ನಿ ಇಲ್ಲಿ ಬಿಜೆಪಿ ಅಭ್ಯರ್ಥಿಯಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಸಿಂದಗಿ ಕ್ಷೇತ್ರದ ಶಾಸಕರಾಗಿದ್ದ ಮನಗೂಳಿ ಅವರ ಪುತ್ರ ಅಶೋಕ್ ಮನಗೂಳಿ ಈಗಾಗಲೇ ಕಾಂಗ್ರೆಸ್ ಸೇರಿರುವುದರಿಂದ, ಉಪಚುನಾವಣೆಯಲ್ಲಿ ಅವರು ಸ್ಪರ್ಧಿಸುವ ಸಾಧ್ಯತೆಯಿದೆ. ಈ ಕ್ಷೇತ್ರವನ್ನು ತನ್ನದಾಗಿಯೇ ಉಳಿಸಿಕೊಳ್ಳುವ ಹಠದಲ್ಲಿರುವ ಜೆಡಿಎಸ್, ಸೂಕ್ತ ಅಭ್ಯರ್ಥಿಯ ಹುಡುಕಾಟದಲ್ಲಿದೆ.
ಉಪಚುನಾವಣೆಯ ಫಲಿತಾಂಶ ನವೆಂಬರ್ 2ಕ್ಕೆ ಪ್ರಕಟವಾಗಲಿದೆ. ಸಾಧಾರಣವಾಗಿ ಉಪಚುನಾವಣೆಯಲ್ಲಿ ಆಡಳಿತ ಪಕ್ಷದ ಪರವಾದ ಫಲಿತಾಂಶವೇ ಇರುತ್ತದಾದರೂ, ಈ ಸಲ ಅದು ಅಷ್ಟು ಸಲೀಸೇ ಎಂಬ ಪ್ರಶ್ನೆಯೂ ಇಲ್ಲದಿಲ್ಲ.
ಮೊದಲನೆಯದಾಗಿ, ಪ್ರತಿ ಸಲವೂ ಚುನಾವಣೆಯನ್ನು ಗೆಲ್ಲಲು ಬಿಜೆಪಿ ಯಾರನ್ನು ಅವಲಂಬಿಸಿರುತ್ತಿತ್ತೊ ಆ ನಾಯಕ ಯಡಿಯೂರಪ್ಪ ಸಿಎಂ ಹುದ್ದೆಯಿಂದ ಕೆಳಗಿಳಿದಿದ್ದಾರೆ. ಅವರನ್ನು ಕೆಳಗಿಳಿಸಲಾಯಿತು ಎಂಬುದು ಗುಟ್ಟೇನೂ ಅಲ್ಲ. ಇಂಥ ಸಂದರ್ಭದಲ್ಲಿ ಬಂದಿರುವ ಉಪಚುನಾವಣೆಯನ್ನು ಬಿಜೆಪಿ ಎದುರಿಸುವಾಗ, ಯಡಿಯೂರಪ್ಪನವರ ನಡೆ ಏನಿದ್ದೀತು ಎಂಬ ಪ್ರಶ್ನೆಯೂ ಇದೆ. ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿಯಲ್ಲಿ ಯಡಿಯೂರಪ್ಪ ಮುಂದಿನ ವಿಧಾನಸಭೆ ಚುನಾವಣೆಯನ್ನು ಗೆಲ್ಲುವುದಕ್ಕೆ ಮೋದಿ ಅಲೆಯೊಂದೇ ಸಾಲದು ಎಂದು ಹೇಳಿರುವುದರ ಮರ್ಮವೂ ಬಿಜೆಪಿಯನ್ನು ಕಾಡದೇ ಇಲ್ಲ. ಹೊಸದಾಗಿ ಸಿಎಂ ಆಗಿರುವ ಬಸವರಾಜ ಬೊಮ್ಮಾಯಿ ಈ ಹಿನ್ನೆಲೆಯಲ್ಲಿ, ಮೊದಲ ಚುನಾವಣಾ ಪರೀಕ್ಷೆಯನ್ನು ಎದುರಿಸಬೇಕಾಗಿದೆ.
ಯಡಿಯೂರಪ್ಪನವರು ಹೇಳಿರುವ ಮತ್ತೊಂದು ಮಾತು, ಪ್ರತಿಪಕ್ಷಗಳನ್ನು ತೀರಾ ಹಗುರವಾಗಿ ಪರಿಗಣಿಸುವಂತಿಲ್ಲ ಎಂಬುದು. ಕಳೆದ ಕೆಲ ಸಮಯದಿಂದ ರಾಜ್ಯ ಕಾಂಗ್ರೆಸ್ ಕೇಂದ್ರ ಮತ್ತು ರಾಜ್ಯದಲ್ಲಿನ ಬಿಜೆಪಿ ಸರ್ಕಾರಗಳ ಮೇಲೆ ಹರಿಹಾಯುತ್ತಿರುವ ರೀತಿಯನ್ನು ಗಮನಿಸಿದರೆ, ಅದರ ಹಿಂದೊಂದು ಸೂತ್ರವಿದೆ ಎಂಬುದನ್ನು ಅಲ್ಲಗಳೆಯಲಾಗದು; ಬಣ ರಾಜಕೀಯದಲ್ಲಿಯೇ ಕಾಂಗ್ರೆಸ್ ಹೈರಾಣಾಗುತ್ತಿರುವ ವಾಸ್ತವದಲ್ಲಿಯೂ. ಇತ್ತೀಚೆಗಷ್ಟೇ ನಡೆದ ಪಾಲಿಕೆ ಚುನಾವಣೆಗಳಲ್ಲಿ ಕಾಂಗ್ರೆಸ್ ತೋರಿದ ಪ್ರದರ್ಶನವನ್ನು ಗಮನಿಸಿದರೂ ಇದು ಗೊತ್ತಾಗುತ್ತದೆ.
ಈಗಿನ ಉಪಚುನಾವಣೆಯಲ್ಲಿ ಗೆಲ್ಲಲಿರುವವರ ಅಧಿಕಾರಾವಧಿ ಒಂದು ವರ್ಷಕ್ಕಿಂತ ತುಸು ಜಾಸ್ತಿ ಅಷ್ಟೆ. ಆದರೆ, ಅದರ ಬೆನ್ನಲ್ಲೇ ಬರಲಿರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ಉಪಚುನಾವಣೆಯ ಫಲಿತಾಂಶಕ್ಕೆ ಮಹತ್ವವಿದೆ. ಹಾಗಾಗಿ ಆಡಳಿತ ಪಕ್ಷದ ಅಲೆಯನ್ನು ಸಮರ್ಥವಾಗಿ ಎದುರಿಸುವ ಗಂಭೀರ ಪ್ರಯತ್ನವನ್ನು ಕಾಂಗ್ರೆಸ್ ಮಾಡದೇ ಇರದು.



