Latestಅಂಕಣಗಳುವಿದೇಶಸುದ್ದಿ

ಹಿಮಯುಗದಲ್ಲಿ ಮನುಷ್ಯರು ನಡೆದಾಡಿರುವ ಹೆಜ್ಜೆ ಗುರುತು ಪತ್ತೆ!

ವಾಷಿಂಗ್ಟನ್: ಸುಮಾರು 23 ಸಾವಿರ ವರ್ಷಗಳ ಹಿಂದೆಯಿದ್ದ ಹಿಮಯುಗದ ಮನುಷ್ಯರ ಹೆಜ್ಜೆಗುರುತುಗಳು ನ್ಯೂ ಮೆಕ್ಸಿಕೋ ಮರುಭೂಮಿ ಪ್ರದೇಶದಲ್ಲಿ ಪತ್ತೆಯಾಗಿದೆ. ಹಿಮಯುಗದ ಅಂತ್ಯಕ್ಕೆ ಮೊದಲೇ ಉತ್ತರ ಅಮೆರಿಕದ ಭಾಗದಲ್ಲಿ ಮನುಷ್ಯರು ನೆಲೆಸಿದ್ದರು ಎಂಬುದಕ್ಕೆ ಇದು ಪುರಾವೆಯಾಗಿದೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ

ಕಳೆದ 2009ರಲ್ಲಿ ವೈಟ್ಸ್ಯಾಂಡ್ಸ್ ನ್ಯಾಷನಲ್ ಪಾರ್ಕ್ ನೊಳಗೆ ಒಣಗಿದ ನೈಸರ್ಗಿಕ ಕೆರೆಯೊಂದರಲ್ಲಿ ಈ ಹೆಜ್ಜೆಗುರುತುಗಳು ಮೊದಲು ಪತ್ತೆಯಾಗಿತ್ತು. ಹಿಮಪ್ರದೇಶವಾಗಿದ್ದ ಪ್ರದೇಶಗಳು ಕಾಲಾನಂತರ ಪರಿವರ್ತನೆ ಹೊಂದುತ್ತಾ ಈಗ ಮರುಭೂಮಿಗಳಾಗಿ ಪರಿವರ್ತನೆಯಾಗಿವೆ.

ಕೆಸರಿನಂತಿದ್ದ ಮೆದು ನೆಲದಲ್ಲಿ ಮನುಷ್ಯರು ಓಡಾಡಿದ ಹೆಜ್ಜೆಗುರುತುಗಳು ಹಾಗೇ ಗಟ್ಟಿಯಾಗಿ ಕಲ್ಲಿನಂತೆ ಮಾರ್ಪಟ್ಟಿರುವುದರಿಂದ ಹೆಜ್ಜೆಗುರುತುಗಳು ಹಾಗೇ ಉಳಿದಿವೆ. ಈ ಬಗ್ಗೆ ದೀರ್ಘಾವಧಿ ಅಧ್ಯಯನ ನಡೆಸಿರುವ ಸಂಶೋಧಕರು, ಹಿಮಯುಗದ ಮನುಷ್ಯರದ್ದೇ ಆಗಿದೆ ಎಂಬುದನ್ನು ಖಚಿತಪಡಿಸಿದ್ದಾರೆ.

ಹೆಜ್ಜೆಗುರುತುಗಳು ಸುಮಾರು 22800 ವರ್ಷಗಳ ಹಿಂದೆಯಿದ್ದ ಮನುಷ್ಯರದ್ದಾಗಿದೆ. ಅವುಗಳಲ್ಲಿ ಹೆಚ್ಚಿನವು ಆಗಿನ ಮಕ್ಕಳು ಮತ್ತು ಯುವಕರದ್ದಾಗಿವೆ. ಹಿರಿ ಮನುಷ್ಯರು ಕುಶಲ ಕರ್ಮಿಗಳಾಗಿದ್ದಾಗ ಅಗತ್ಯವಾಗಿ ಬೇಕಾದ ನೀರು, ಕಟ್ಟಿಗೆ ತರುವ ಮಕ್ಕಳು ಅತ್ತಿಂದಿತ್ತ ಹೆಚ್ಚು ಓಡಾಟ ನಡೆಸುತ್ತಿದ್ದರು. ಅದೇ ಜಾಗದಲ್ಲಿ ಕಾಡುಪ್ರಾಣಿಗಳ ಹೆಜ್ಜೆಗುರುತುಗಳೂ ಪತ್ತೆಯಾಗಿವೆ. ಮನುಷ್ಯರ ಜತೆಯಲ್ಲೇ ಪ್ರಾಣಿಗಳೂ ಜೀವಿಸಿರುವುದಕ್ಕೆ ಈ ಹೆಜ್ಜೆಗುರುತುಗಳು ಪುರಾವೆಯಾಗಿದೆ ಎಂದು ಅಮೆರಿಕದ ಭೂವಿಜ್ಞಾನ ಸಮೀಕ್ಷೆ ಇಲಾಖೆಯ ಅಧ್ಯಯನದ ಸಂಶೋಧನಾ ವರದಿಯಲ್ಲಿ ತಿಳಿಯಲಾಗಿದೆ.

ಮತ್ತೆ ಹಿಮಯುಗಕ್ಕೇ ಹಿಂತಿರುಗಲಿದೆಯಾ ಭೂಮಿ?!

ಸುಮಾರು 500 ಕೋಟಿ ವರ್ಷಗಳ ಇತಿಹಾಸದಲ್ಲಿ ಭೂಮಿಯಲ್ಲಿ ಹೇರಳ ಹಿಮಯುಗಗಳು ಸೃಷ್ಟಿಯಾಗಿವೆ. ಅತ್ಯಂತ ಇತ್ತೀಚಿನ ಅಂತಿಮ ಹಿಮಯುಗವು ಸುಮಾರು ಹದಿನೆಂಟು ಸಾವಿರ ವರ್ಷಗಳ ಹಿಂದೆ ಸಂಭವಿಸಿತ್ತು. ಆಗ ಭೂಮಿ ಮೇಲಿದ್ದ ಜೀವಿಗಳು ಹಿಮರಾಶಿಗಳ ನಡುವೆ ತೀವ್ರ ಚಳಿಯಿಂದ ಅದೇ ವಾತಾವರಣಕ್ಕೆ ಹೊಂದಿಕೊಂಡು ಬದುಕಿದ್ದವು. ಕಳೆದ 10 ಸಾವಿರ ವರ್ಷಗಳ ಹಿಂದೆ ಕೊನೇ ಹಿಮಯುಗದ ಅಂತ್ಯ ಕಂಡಿತು. ಭೂಮಿಯ ಬಹುಭಾಗಗಳಲ್ಲಿ ಬೆಚ್ಚನೆಯ ಯುಗ ಆರಂಭಗೊಂಡಿತು. ಆ ಹಿಮಯುಗದಿಂದಲೂ ಶಾಶ್ವತವಾಗಿ ನಿಂತಿರುವ ಅತೀ ಹಿಮರಾಶಿಯ ದಾಸ್ತಾನು ಈಗಲೂ ಎತ್ತರದ ಆರ್ಕಟಿಕ್ ಪ್ರದೇಶಗಳಲ್ಲಿ ಕಾಣಬಹುದಾಗಿದೆ.

ಹಿಮಯುಗ ಸೃಷ್ಟಿಯಾಗಲು ವಾಯುಮಂಡಲದ ಉಷ್ಣತೆಯಲ್ಲಿ ಭಾರೀ ಬದಲಾವಣೆ ಆಗಬೇಕಾದ್ದೇನಿಲ್ಲ. ತಾಪಮಾನದ ಪ್ರಮಾಣವು ಕೆಲ ವರ್ಷಗಳ ಕಾಲ ಸರಾಸರಿ 2 ಡಿಗ್ರಿ ಕುಸಿದು, ದೀರ್ಘಾವಧಿ ಏರಿಕೆ ಕಾಣದಿದ್ದರೆ, ಉಷ್ಣಾಂಶ ಇನ್ನಷ್ಟು ಕಡಿಮೆಯಾಗಿ ತಂತಾನೇ ಪೂರ್ಣ ಪ್ರಮಾಣದ ಹಿಮಯುಗ ಸೃಷ್ಟಿಯಾಗುತ್ತದೆ ಎಂದು ಸಂಶೋಧಕರು ಅಭಿಪ್ರಾಯಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button