ಜಿಲ್ಲಾ ಸುದ್ದಿರಾಮನಗರ

ಮೇಕೆದಾಟು ಪಾದಯಾತ್ರೆಗೆ ತಡೆ; ಕನಕಪುರದಲ್ಲಿ ಸಂಘಟನೆಗಳ ಪ್ರತಿಭಟನೆ

ರಾಮನಗರ: ನೀರಾವರಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ವಿಧಾನಸೌಧಕ್ಕೆ ಪಾದಯಾತ್ರೆ ಕೈಗೊಂಡಿದ್ದ ಪಾದಯಾತ್ರಿಗಳನ್ನು ಬಂಧಿಸಿದ್ದ ಜಿಲ್ಲಾಡಳಿತ ಹಾಗು ಸರ್ಕಾರದ ವಿರುದ್ಧ ಕನಕಪುರದಲ್ಲಿ ಪ್ರಗತಿಪರ ಸಂಘಟನೆಗಳ ಮುಖಂಡರು ಇಂದು ಪ್ರತಿಭಟನೆ ನಡೆಸಿದರು.

ದೇಗುಲಮಠದಲ್ಲಿ ಸಮಾವೇಶಗೊಂಡ ರೈತ ಸಂಘ, ಹಸೀರು ಸೇನೆ, ಕನ್ನಡಪರ ಸಂಘಟನೆಗಳು ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು ಎಂ.ಜಿ. ರಸ್ತೆಯಲ್ಲಿ ಮೇರವಣಿಗೆ ನಡೆಸಿ, ಚನ್ನಬಸವಪ್ಪ ವೃತ್ತದಲ್ಲಿ ಧರಣಿ ನಡೆಸುತ್ತಿದ್ದಾರೆ.

ಬಯಲುಸೀಮೆಯ ನಾಲ್ಕೈದು ಜಿಲ್ಲೆಗಳ ಜನ-ಜಾನುವಾರುಗಳ ಕುಡಿಯುವ ನೀರಿಗಾಗಿ ಮೇಕೆದಾಟು ಯೋಜನೆಯನ್ನು ಶೀಘ್ರವಾಗಿ ಅನುಷ್ಠಾನ ಮಾಡುವಂತೆ ಜನರ ಭಾವನೆಯನ್ನು ಅರಿತು ಸರ್ಕಾರದ ಮೇಲೆ‌ ಒತ್ತಡ ಹಾಕಲು ಶಾಂತಿಯುತವಾಗಿ ಮಠಾಧೀಶರ ನೇತೃತ್ವದಲ್ಲಿ ಪಾದಯಾತ್ರೆ ನಡೆಸುತ್ತಿದ್ದವರನ್ನು ಪೊಲೀಸರು ಬಂಧಿಸಿ, ಪಾದಯಾತ್ರೆಗೆ ತಡೆಯುಂಟು ಮಾಡಿದ್ದು ಖಂಡನೀವೆಂದು ಕಿಡಿಕಾರಿದರು.

ಜನರ ಭಾವನೆ ಮತ್ತು ಅವರ ಹಕ್ಕುಗಳಿಗೆ ಸ್ಪಂದಿಸಬೇಕಾದ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ರಾಜ್ಯದ ಹಿತ ಕಾಯುವುದಕ್ಕಿಂತ ತಮಿಳುನಾಡಿನ ಹಿತಕಾಯಲು ನಿಂತಿದೆ. ತಮಿಳುನಾಡಿನವರ ಖ್ಯಾತೆಗಿಂತ ಜಿಲ್ಲಾಡಳಿತ ಮತ್ತು ಸರ್ಕಾರದ ಖ್ಯಾತೆ ಕನ್ನಡ ನಾಡಿನ ಜನತೆಗೆ ಹೆಚ್ಚಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳು ಪ್ರತಿಭಟನೆ ಮಾಡುವಾಗ ಸುಮ್ಮನಿರುವ ಜಿಲ್ಲಾಡಳಿತ ರೈತರು ಪ್ರತಿಭಟನೆ ಪಾದಯಾತ್ರೆ ಮಾಡಿದಾಗ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಎನ್ನುವ ಸಿದ್ದಾಂತಕ್ಕೆ ಅಂಟಿಕೊಂಡಿದೆ ಎಂದು ಪ್ರತಿಭಟನಾನಿರತರು ದೂರಿದರು.

ನಾವು ಪಾದಯಾತ್ರೆ ಹತ್ತಾರು ಸಭೆಗಳನ್ನು ವಿವಿಧ ಸಂಘಟನೆಗಳ ಸಮ್ಮುಖದಲ್ಲಿ ಮಾಡಿ, ಎರಡ್ಮೂರು ತಿಂಗಳ ಹಿಂದಿನಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದೇವು. ಆದರೇ ಜಿಲ್ಲಾಡಳಿತ ಮತ್ತು ಸರ್ಕಾರ ಈ ಬಗ್ಗೆ ಮೌನ ವಹಿಸಿದ್ದರಿಂದ ಪಾದಯಾತ್ರೆಗೆ ಅನುಮತಿಯನ್ನು ಕೇಳಿ, ಶಾಂತಿಯುತ ಪಾದಯಾತ್ರೆ ಹಮ್ಮಿಕೊಂಡಿದ್ದೆವು. ಅನುಮತಿಯನ್ನ ನಿರಾಕರಿಸಿ, ಜಿಲ್ಲಾಧಿಕಾರಿಗಳು ಪಾದಯಾತ್ರೆ ತಡೆದಿದ್ದಾರೆ. ಅವರು ಸ್ಥಳಕ್ಕೆ ಬರುವವರೆಗೂ ತಾವು ಧರಣಿಯನ್ನು ಕೈ ಬಿಡುವುದಿಲ್ಲವೆಂದು ಪ್ರತಿಭನೆಯಲ್ಲಿ ಮಾತನಾಡಿದ ಪ್ರಮುಖರು ಘೋಷಣೆ ಮಾಡಿದರು.

Related Articles

Leave a Reply

Your email address will not be published. Required fields are marked *

Back to top button