
ಬೆಂಗಳೂರು: ಕೆಎಸ್ಆರ್ಪಿ ಒಂದನೇ ಪಡೆ, ಬೆಂಗಳೂರು ಘಟಕದಲ್ಲಿ ನಡೆದಿದೆ ಎನ್ನಲಾದ ಹಣ ದುರುಪಯೋಗ ಹಾಗೂ ಅವ್ಯವಹಾರದಲ್ಲಿ ಭಾಗಿಯಾದ ಅಧಿಕಾರಿಗಳ ಮೇಲೆ, ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿಸಲಾಗುವುದು ಹಾಗೂ ಸೇವೆಯಿಂದ ಅಮಾನತುಪಡಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಿಧಾನ ಪರಿಷತ್ತಿನಲ್ಲಿಂದು ಹೇಳಿದ್ದಾರೆ.
ಪ್ರಶ್ನೋತರ ವೇಳೆಯಲ್ಲಿ, ಬಿಜೆಪಿ ಸದಸ್ಯ ಅಡಗೂರ್ ವಿಶ್ವನಾಥ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೆ ಎಸ್ಆರ್ ಪಿ ಬೆಂಗಳೂರು ಒಂದನೇ ಘಟಕದ ಕ್ಯಾಂಟೀನ್ ನಲ್ಲಿ ಸುಮಾರು 27 ಲಕ್ಷಕ್ಕೂ ಹೆಚ್ಚಿನ ಹಣ ದುರುಪಯೋಗವಾಗಿದೆ ಎಂದು ಆಂತರಿಕ ಲೆಕ್ಕ ಪರಿಶೋಧನೆಯಲ್ಲಿ ಬೆಳಕಿಗೆ ಬಂದಿದೆ.
ಈ ಸಂಬಂಧ ಸುಮಾರು 17 ಲಕ್ಷ ರೂಪಾಯಿಗಳನ್ನು ಮರು ಪಾವತಿಸಲಾಗಿದ್ದು, ಪ್ರಕರಣದಲ್ಲಿ ಶಾಮೀಲಾಗಿರುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು. ಅಲ್ಲದೆ, ಸೇವೆಯಿಂದ ಅಮಾನತುಪಡಿಸಲಾಗುವುದು ಎಂದರು.
ಮಾನ್ಯ ಸದಸ್ಯರು, ಹಣ ದುರುಪಯೋಗ ಪ್ರಕರಣವನ್ನು ಸರಕಾರದ ಗಮನಕ್ಕೆ ತಂದು, ನಮ್ಮ ಕಣ್ಣು ತೆರೆಸಿದ್ದಾರೆ ಎಂದೂ ಸಚಿವರು ಈ ಸಂಧರ್ಭದಲ್ಲಿ ಹೇಳಿದರು.




