ಧಾರವಾಡದಲ್ಲಿ ಬೀದಿಗೆ ಇಳಿದ ಪಂಚಮಸಾಲಿ ಮುಖಂಡರು : 2 ಎ ಮೀಸಲಾತಿಗೆ ಪಟ್ಟು

ಧಾರವಾಡ: ಪಂಚಮಸಾಲಿ ಸಮಾಜಕ್ಕೆ 2 ಮೀಸಲಾತಿ ನೀಡುವಂತೆ ಅಗ್ರಹಿಸಿ, ಧಾರವಾಡದಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಂಘಟನೆಯ ಮುಖಂಡರು ಹಾಗೂ ಬೆಂಬಲಿಗರು ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಧಾರವಾಡ ಘಟಕದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಮುಖಂಡರು, ಬೆಂಬಲಿಗರು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದರು. ಕಳೆದ ಹಲವು ವರ್ಷಗಳಿಂದ ಪಂಚಮಸಾಲಿ ಸಮಾಜದಿಂದ ಮನವಿ ನೀಡಲಾಗುತ್ತಿದೆ. ಆದರೆ ಸರ್ಕಾರ ಭರವಸೆಗಳನ್ನು ನೀಡುತ್ತಾ ಬರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಹಿಂದಿನ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಆರು ತಿಂಗಳ ಸಮಯ ಅವಕಾಶ ಕೇಳಿದ್ದರು. ಆದರೆ ಈಗ ಮುಖ್ಯಮಂತ್ರಿ ಬದಲಾಗಿದ್ದಾರೆ. ಈ ಹಿಂದೆ ಬಸವರಾಜ ಬೊಮ್ಮಾಯಿ ಅವರು 2 ಮೀಸಲಾತಿ ಈಡೇರುವುದಾಗಿ ಹೇಳಿದ್ದು, ಈಗ ಅವರೆ ಮುಖ್ಯಮಂತ್ರಿ ಆಗಿದ್ದಾರೆ. ಅಲ್ಲದೆ ಅಂದು ಯಡಿಯೂರಪ್ಪ ಅವರು ನೀಡಿದ್ದ ಗಡುವು ಕೂಡಾ ಮುಗಿಯುತ್ತಾ ಬಂದಿದೆ. ಆದ ಕಾರಣ ಕೂಡಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಂಚಮಸಾಲಿ ಲಿಂಗಾಯತ 2 ಮೀಸಲಾತಿ ಜಾರಿ ಮಾಡಬೇಕು ಎಂದು ಅಗ್ರಹಿಸಿದರು. ಒಂದು ವೇಳೆ ಮಾಡದಿದ್ದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.




