ರಾಜಕೀಯರಾಷ್ಟ್ರೀಯ

ಉತ್ತರ ಪ್ರದೇಶದಲ್ಲಿ ಬದಲಾಗಲಿದೆಯೇ ನಾಯಕತ್ವ?; ಬಿ ಎಲ್ ಸಂತೋಷ್ ಹೈಕಮಾಂಡ್​ಗೆ ​ಒಪ್ಪಿಸಿದ ವರದಿಯಲ್ಲೇನಿದೆ?

ಎಂ ಹೈದರ್

ಉತ್ತರ ಪ್ರದೇಶದಲ್ಲಿ ನಾಯಕತ್ವ ಬದಲಾವಣೆ ಆಗದಿದ್ದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಫಲಿತಾಂಶ ಎರಡು ಅಂಕಿಯನ್ನು ದಾಟುವುದಿಲ್ಲ, ಎಂದು ಬಿಜೆಪಿಯು ಉತ್ತರ ಪ್ರದೇಶದಲ್ಲಿ ನಡೆಸಿದ ಆಂತರಿಕ ಸಮೀಕ್ಷೆಯು ಹೇಳಿದೆ ಎನ್ನಲಾಗಿದೆ.

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನಾಯಕತ್ವ ವಿರುದ್ದ ಸುಮಾರು 200 ಕ್ಕೂ ಹೆಚ್ಚು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ, ಅಲ್ಲದೆ 2019 ರಲ್ಲೇ ಸುಮಾರು150 ಶಾಸಕರು ಆದಿತ್ಯನಾಥ್ ವಿರುದ್ದ ವಿಧಾನಸಭೆಯಲ್ಲೇ ಧರಣಿ ನಡೆಸಿದ್ದರು ಆದರೆ ಇದು ಮಾಧ್ಯಮಗಳಲ್ಲಿ ವರದಿಯಾಗಿರಲಿಲ್ಲ,

ಕಳೆದ ಎರಡು ದಿನಗಳ ಹಿಂದೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಮೂರು ದಿನಗಳ ಲಕ್ನೋ ಭೇಟಿಯಲ್ಲಿ ಅವರು ಹಲವು ನಾಯಕರು ಮಂತ್ರಿಗಳು ಶಾಸಕರುಗಳನ್ನು ಪ್ರತ್ಯೇಕವಾಗಿ ಮಾತನಾಡಿಸಿ ಉತ್ತರ ಪ್ರದೇಶದ ಬಿಜೆಪಿ ಒಳ ಬೇಗುದಿಯನ್ನು ಬುದುವಾರ, ಮೋದಿ, ಅಮಿತ್ ಶಾ, ಮತ್ತು ನಡ್ಡಾ ಅವರುಗಳಿಗೆ ಒಪ್ಪಿಸಿದ್ದಾರೆ.

ಈಗಾಗಲೇ ಉತ್ತರ ಪ್ರದೇಶದ ಕಾನೂನು ಮಂತ್ರಿ ಬ್ರಿಜೇಶ್ ಪಾಠಕ್ ಮತ್ತು ಸಂಸದ ಕೌಶಲ್ ಕಿಶೋರ್ ಅವರುಗಳು ಬಹಿರಂಗವಾಗಿಯೇ ಯೋಗಿ ಆದಿತ್ಯನಾಥ್ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಉತ್ತರ ಪ್ರದೇಶದ ಬಿಜೆಪಿ ಪಕ್ಷ , ಮತ್ತು ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ‌‌ ಎನ್ನುವ ಸ್ಪಷ್ಟ ಮಾಹಿತಿ ಹೈಕಮಾಂಡ್ ಗೆ ಸಿಕ್ಕಿದೆ. ಸರ್ಕಾರದಲ್ಲಿ ಹಲವು ನಿಗಮ ಮಂಡಳಿಗಳಿಗೆ ಅಧ್ಯಕ್ಷರು ಗಳನ್ನು ನೇಮಕ ಮಾಡದೆ ಖಾಲಿ ಇದೆ, ಅಲ್ಲದೇ ಪಕ್ಷದಲ್ಲೂ ಹಲವು ಹುದ್ದೆಗಳು ಖಾಲಿ ಇದೆ. ಇದರಿಂದ, ಯೋಗಿ ಆದಿತ್ಯನಾಥ್ ನಡೆ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.

ರಾಜ್ಯದಲ್ಲಿ ಯೋಗಿ ಆದಿತ್ಯನಾಥ್ ಬಗ್ಗೆ ಬ್ರಾಹ್ಮಣ ಸಮುದಾಯವು ಹೆಚ್ಚು ಅಸಮಾಧಾನ ಹೊಂದಿದೆ ಎನ್ನಲಾಗಿದ್ದು ಯೋಗಿಯ ಸರ್ಕಾರದಲ್ಲಿ ಹಲವು ಬ್ರಾಹ್ಮಣರು ಸರ್ಕಾರದ ದೌರ್ಜನ್ಯಕ್ಕೆ ಪ್ರಾಣ ತೆತ್ತಿದ್ದಾರೆ ಎಂದು ಬ್ರಾಹ್ಮಣರು ವ್ಯಾಪಕವಾದ ಅಸಮಾಧಾನ ಹೊಂದಿದ್ದಾರೆ. ವಿಕಾಸ್ ದುಬೆಯನ್ನು ಎನ್ ಕೌಂಟರ್ ಮಾಡಿದ ಸಂದರ್ಭದಲ್ಲಿ ಸುಮಾರು 12 ಜನ ಅಮಾಯಕ ಬ್ರಾಹ್ಮಣರನ್ನು ಕೊಲ್ಲಲಾಯಿತು ಎಂಬ ಆರೋಪ ಆದಿತ್ಯನಾಥ್ ಮೇಲಿದೆ. ಅಲ್ಲದೆ ಯೋಗಿ ಆದಿತ್ಯನಾಥ್ ಮತ್ತು ಒಬ್ಬ ಅಧಿಕಾರಿಯ ಮೇಲೆ, ಇಂದ್ರಕಾಂತ್ ತ್ರಿಪಾಠಿ ಎಂಬ ಬ್ರಾಹ್ಮಣ ವ್ಯಾಪಾರಿ ಭ್ರಷ್ಟಾಚಾರದ ಆರೋಪ ಹೊರಿಸಿ ಮಾಡಿದ ವಿಡಿಯೋ ವೈರಲ್ ಆದ ಕೆಲ ಗಂಟೆಗಳಲ್ಲಿ ಆ ವ್ಯಕ್ತಿಯನ್ನು ಗುಂಡಿಟ್ಟು ಕೊಲ್ಲಲಾಯಿತು. ಇಂತಹ ಹಲವು ಕಾರಣಗಳಿಂದ ಬ್ರಾಹ್ಮಣರೊಳಗೆ ಆಕ್ರೋಶ ಮನೆಮಾಡಿದೆ.

ಒಬಿಸಿ ಸಮುದಾಯವನ್ನು ಪ್ರತಿನಿದಿಸುವ ಯೋಗಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿರುವ ಕೇಶವ ಪ್ರಸಾದ್ ಮೌರ್ಯರಿಗೆ ಆದಿತ್ಯನಾಥ್ ನಿರಂತರವಾಗಿ ಕಿರುಕುಳ ನೀಡಿರುವುದು ಪಂಚಾಯಿತಿ ಸಭೆಯೊಂದರಲ್ಲಿ ಹಾಡುಹಗಲೇ ಬಲಿಯಾ ಎಂಬಲ್ಲಿ ಹಿಂದುಳಿದ ಗಡರಿಯಾ ಸಮುದಾಯಕ್ಕೆ ಸೇರಿದ ಮುಖಂಡರೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿದಾಗ, ಮತ್ತು ಹಾತ್ರಸ್ ಅತ್ಯಾಚಾರ ಘಟನೆಯಲ್ಲಿ ಯೋಗಿ ಠಾಕೂರ್ ಗಳ ರಕ್ಷಣೆಗೆ ನಿಂತಿದ್ದು ಹೀಗೆ ಯೋಗಿ ಆದಿತ್ಯನಾಥ್ ಮೇಲೆ ಹಲವು ರೀತಿಯ ಆಕ್ರೋಶ ಉತ್ತರ ಪ್ರದೇಶದ ಜನರಿಗಿದೆ.

ಒಟ್ಟಿನಲ್ಲಿ ಬಿ ಎಲ್ ಸಂತೋಷ್ ನೀಡಿರುವ ವರದಿ ಯೋಗಿ ಆದಿತ್ಯನಾಥ್ ಮುಂದಿನ ನಾಯಕತ್ವಕ್ಕೆ ಪೂರಕವಾಗಿಲ್ಲ ಎಂಬುದು ಮತ್ತು ಯೋಗಿಯು ಮೋದಿಯ ಹಾದಿಯಲ್ಲಿನ ಮುಳ್ಳು ಎಂಬ ವಿಶ್ಲೇಷಣೆಗಳ ನಡುವೆ ಉತ್ತರ ಪ್ರದೇಶದ ಬಿಜೆಪಿ ನಾಯಕತ್ವಕ್ಕೆ ಹೊಸ ಮುಖಕ್ಕೆ ಮಣೆ ಹಾಕಿ ಮುಂದಿನ ವಿಧಾನಸಭಾ ಚುನಾವಣೆಯನ್ನು ಎದುರಿಸಲು, ಬಿಜೆಪಿ ಹೈಕಮಾಂಡ್ ತಯಾರಿ ನಡೆಸಿದೆ ಎನ್ನಲಾಗಿದೆ.

 

Spread the love

Related Articles

Leave a Reply

Your email address will not be published. Required fields are marked *

Back to top button