ಟಿಎಂಸಿ ಸೇರಿದ ಬಬುಲ್ ಸುಪ್ರಿಯೊ; ದೀದಿ ಪರ ಮತ ಕೇಳಲಿದ್ದಾರೆ ‘ಬಿಜೆಪಿ ಸ್ಟಾರ್ ಕ್ಯಾಂಪೇನರ್’

ಕೋಲ್ಕತ್ತಾ: ನಾಟಕೀಯ ಬೆಳವಣಿಗೆಯೊಂದು ಪಶ್ಚಿಮ ಬಂಗಾಳದಲ್ಲಿ ಆಗಿದೆ. ಬಿಜೆಪಿ ಮಾಜಿ ಮುಖಂಡ, ಸಂಸದ ಬಬುಲ್ ಸುಪ್ರಿಯೊ ಶನಿವಾರ ತೃಣಮೂಲ ಕಾಂಗ್ರೆಸ್ ಸೇರಿದ್ದಾರೆ.
ರಾಜಕೀಯ ನಿವೃತ್ತಿ ಘೋಷಿಸಿ ಎರಡು ತಿಂಗಳುಗಳೂ ಕಳೆದಿರಲಿಲ್ಲ. ಅಷ್ಟರಲ್ಲೇ ಟಿಎಂಸಿ ಸೇರ್ಪಡೆ ಮೂಲಕ ಅವರು ಮತ್ತೆ ಸಕ್ರಿಯ ರಾಜಕಾರಣಕ್ಕೆ ಬಂದಿದ್ದಾರೆ. ಜುಲೈ 31ರಂದು ಅವರು ರಾಜಕೀಯ ತ್ಯಜಿಸುವ ಘೋಷಣೆ ಮಾಡಿದ್ದಲ್ಲದೆ, ಸಂಸದನ ಸ್ಥಾನಕ್ಕೂ ರಾಜೀನಾಮೆ ನೀಡುವ ಮಾತಾಡಿದ್ದರು. ಪಶ್ಚಿಮ ಬಂಗಾಳದ ಅಸನ್ಸೋಲ್ನಿಂದ ಸಂಸದರಾದ ಅವರು, ರಾಜೀನಾಮೆ ಬಳಿಕವೂ ಕ್ಷೇತ್ರಕ್ಕಾಗಿ ಕೆಲಸ ಮಾಡುವುದಾಗಿ ಹೇಳಿದ್ದರು.
ರಾಜಕೀಯ ನಿವೃತ್ತಿ ಘೋಷಿಸಿದ್ದಾಗ ಅದನ್ನು ಮನಃಪೂರ್ವಕವಾಗಿಯೇ ಮಾಡಿದ್ದೆ. ಆದರೂ ಬಹುದೊಡ್ಡ ಅವಕಾಶ ನನ್ನ ತೀರ್ಮಾನ ಬದಲಿಸುವಂತೆ ಮಾಡಿತು ಎಂದು ಟಿಎಂಸಿ ಸೇರ್ಪಡೆಯನ್ನು ಅವರು ಬಣ್ಣಿಸಿದ್ದಾರೆ. ನನ್ನ ರಾಜಕೀಯ ನಿವೃತ್ತಿ ತೀರ್ಮಾನ ತಪ್ಪು ಮತ್ತು ಭಾವುಕವಾದದ್ದು ಎಂದು ನನ್ನ ಆಪ್ತರೆಲ್ಲ ಅಭಿಪ್ರಾಯಪಟ್ಟಿದ್ದರು ಎಂದು ಸುಪ್ರಿಯೊ ಹೇಳಿದ್ದಾರೆ.
ನನ್ನ ಆ ತೀರ್ಮಾನವನ್ನು ಬದಲಿಸಿಕೊಂಡಿರುವುದಕ್ಕೆ ನನಗೆ ಸಂತೋಷ ಮತ್ತು ಹೆಮ್ಮೆಯಿದೆ. ರಾಜ್ಯದ ಜನರ ಸೇವೆಗೆ ಇದು ನನಗೆ ಬಹು ದೊಡ್ಡ ಅವಕಾಶ. ತುಂಬ ಉತ್ಸುಕನಾಗಿದ್ದೇನೆ. ಸೋಮವಾರ ದೀದಿಯನ್ನು ಭೇಟಿಯಾಗುವೆ ಎಂದು ಸುಪ್ರಿಯೊ ತಿಳಿಸಿದ್ದಾರೆ.
ರಾಜಕೀಯ ನಿವೃತ್ತಿ ಬಗ್ಗೆ ಪ್ರಕಟಿಸುವಾಗ ಅವರು, ರಾಜ್ಯದಲ್ಲಿನ ಬಿಜೆಪಿ ನಾಯಕರೊಂದಿಗಿನ ಭಿನ್ನಾಭಿಪ್ರಾಯದ ಬಗ್ಗೆ ಪ್ರಸ್ತಾಪಿಸಿದ್ದರು. ಇದೀಗ ಅವರು ಬಿಜೆಪಿಯ ತೀವ್ರ ವಿರೋಧಿ ಮಮತಾ ಬ್ಯಾನರ್ಜಿಯವರ ಪಕ್ಷ ಸೇರಿರುವುದು ಮಹತ್ವದ ಬೆಳವಣಿಗೆಯಾಗಿದೆ.
ಇದೇ 30ರಂದು ಭವಾನಿಪುರ ಉಪಚುನಾವಣೆ ನಡೆಯಲಿದ್ದು, ಕುತೂಹಲಕಾರಿ ಸಂಗತಿಯೆಂದರೆ, ಅಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿರುವವರು ಬಬುಲ್ ಸುಪ್ರಿಯೊ ಅವರ ಕಾನೂನು ಸಲಹೆಗಾರರಾಗಿದ್ದ ಪ್ರಿಯಾಂಕಾ ಟಿಬ್ರೇವಾಲ್. ಉಪಚುನಾವಣೆ ಪ್ರಚಾರದಲ್ಲಿ ಬಿಜೆಪಿ ಪರ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸುಪ್ರಿಯೊ ಅವರೂ ಇದ್ದರು.
ಮುಕುಲ್ರಾಯ್ ಸೇರಿದಂತೆ ಈಗಾಗಲೇ ತೃಣಮೂಲ ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರಿದ್ದ ಮೂವರೂ ಟಿಎಂಸಿಗೇ ಮರಳಿರುವ ಆಘಾತದಿಂದ ಬಿಜೆಪಿ ಚೇತರಿಸಿಕೊಳ್ಳುವ ಮೊದಲೇ ಇದೀಗ ಬಿಜೆಪಿ ಮಾಜಿ ನಾಯಕ ಸುಪ್ರಿಯೊ ಟಿಎಂಸಿ ಸೇರಿರುವುದು ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಮಹತ್ವ ಪಡೆದಿದೆ.
