ಉತ್ತರ ಕನ್ನಡಜಿಲ್ಲಾ ಸುದ್ದಿ

ಶಿರಸಿ : ಮೂರು ವರ್ಷದಿಂದ ಅಡಿಕೆ ಬೆಳೆ ಹಾನಿಗೆ ಸಿಗದ ಪರಿಹಾರ

ಕಾರವಾರ : ಅತಿಯಾದ ಮಳೆ,ಆಗಾಗ ಬಂದು ಹೋಗುವ ಬಿಸಿಲು ಉತ್ತರ ಕನ್ನಡ ಜಿಲ್ಲೆಯ ಮಲೆನಾಡಿನ ಪ್ರಮುಖ ಬೆಳೆ ಅಡಿಕೆಗೆ ಕೊಳೆರೋಗ ಹೆಚ್ಚು ಆವರಿಸಲು ಅನುಕೂಲವಾಗುತ್ತಿದೆ. ಅಲ್ಪ ಮೊತ್ತದ ವಿಮೆ ಸೌಲಭ್ಯ ಬಿಟ್ಟರೆ ಹಾನಿಗೀಡಾಗುವ ಬೆಳೆಗೆ ಪರಿಹಾರ ನೀಡಲು ಸರ್ಕಾರದ ಸ್ಪಷ್ಟ ಮಾರ್ಗಸೂಚಿ ಇಲ್ಲದ ಕಾರಣ ಮೂರು ವರ್ಷದಿಂದ ಅಡಿಕೆ ಬೆಳೆಗಾರರಿಗೆ ನಿಗದಿಯಾದ ಪರಿಹಾರ ದೊರೆತಿಲ್ಲ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ ಅಡಿ (ಎನ್.ಡಿ.ಆರ್.ಎಫ್.) ಅಡಿಕೆ ತೋಟಕ್ಕೆ ಹಾನಿ ಉಂಟಾದರೆ ಮಾತ್ರ ಪರಿಹಾರ ನೀಡಲು ಅವಕಾಶವಿದೆ.ಅತಿವೃಷ್ಟಿ ಕಾರಣಕ್ಕೆ ಉಂಟಾದ ಕೊಳೆರೋಗದಿಂದ ಎದುರಾಗುವ ಹಾನಿಗೆ ಪರಿಹಾರ ನೀಡಲು ಅವಕಾಶ ಇಲ್ಲ. ಹವಾಮಾನ ಆಧಾರಿತ ಬೆಳೆವಿಮೆ ಅಡಿ ಪ್ರತಿ ಹೆಕ್ಟೇರ್ ಗೆ 1.28 ಲಕ್ಷ ರೂ. ವಿಮಾ ಮೊತ್ತ ಮಂಜೂರಾಗುತ್ತದೆ. ಆದರೆ ಕಳೆದ ಮೂರು ವರ್ಷದಿಂದ ಸುರಿದ ಮಳೆಯಿಂದ ತೋಟವನ್ನೇ ಕಳೆದುಕೊಂಡ ರೈತರು ಇತ್ತ ಸಮರ್ಪಕ ಪರಿಹಾರ ಸಿಗದೇ ಕಂಗಾಲಾಗಿದ್ದಾರೆ.

ಪ್ರತಿ ಬಾರಿಯೂ ಮಲೆನಾಡು ಭಾಗದಲ್ಲಿ ಮಳೆ ಪ್ರಮಾಣ ಅಧಿಕವಾಗಿದೆ.ಹೀಗಾಗಿ ಕೊಳೆರೋಗ ಕಾಣಿಸಿಕೊಳ್ಳುವುದು ಸಾಮಾನ್ಯ. ಸಾವಿರಾರು ಕ್ವಿಂಟಲ್ ಅಡಿಕೆ ಬೆಳವಣಿಗೆಗೂ ಮೊದಲೆ ಉದುರಿ ಹಾಳಾಗುತ್ತಿವೆ. ರೈತರು ಎದುರಿಸುವ ನಷ್ಟಕ್ಕೆ ಈವರೆಗೂ ಸರ್ಕಾರ ಸೂಕ್ತ ಪರಿಹಾರ ನಿಗದಿಪಡಿಸದಿರುವುದು ಪರಿಹಾರ ವಿಳಂಬಕ್ಕೆ ಕಾರಣವಾಗಿದೆ.

ಇನ್ನು ವಿಮೆ ಸೌಲಭ್ಯ ಜಾರಿಯಲ್ಲಿರುವ ಕಾರಣಕ್ಕೆ ಕೊಳೆರೋಗಕ್ಕೆ ಪ್ರತ್ಯೇಕ ಪರಿಹಾರ ನೀಡಲು ಅವಕಾಶ ಇಲ್ಲ. ಪ್ರತಿ ವರ್ಷ ಕೊಳೆ ರೋಗದಿಂದ ಉಂಟಾದ ಹಾನಿಯ ಕುರಿತು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆಯಾಗುತ್ತಿದೆ. ಪರಿಹಾರದ ಬಗ್ಗೆ ಸರ್ಕಾರದ ಮಟ್ಟದಲ್ಲಿಯೇ ನಿರ್ಣಯವಾಗಬೇಕು ಎಂದು ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಬಿ.ಪಿ.ಸತೀಶ್ ಅವರು ಹೇಳುತ್ತಾರೆ.

2019 – 20 ರಲ್ಲಿ 323.46 ಕೋಟಿ ರೂ.2020 – 21 ರಲ್ಲಿ 78.29 ಕೋಟಿ ರೂ. ಮೊತ್ತದ ಅಡಿಕೆ ರೋಗದಿಂದ ನಷ್ಟವಾಗಿರುವ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿತ್ತು. ಈ ಹಾನಿಗೆ ಈವರೆಗೂ ಪರಿಹಾರ ಮಾತ್ರ ಲಭಿಸಿಲ್ಲ.

ಬಂಗಾರದ ಬೆಲೆ ಬಂದರೂ ಕೊಳೆ ರೋಗದಿಂದ ಕೈಗೆ ಸಿಗದ ಬೆಳೆ:

ಕಳೆದ ಎರಡು ತಿಂಗಳಿಂದ ಅಡಿಕೆ ದರ ಮಾರುಕಟ್ಟೆಯಲ್ಲಿ ನಿರಂತರ ಏರಿಕೆ ಕಾಣುತ್ತಿದೆ.ಕೆಂಪು ಅಡಿಕೆಗೆ ಕ್ವಿಂಟಲ್ ಗೆ 50,000 ರೂ.ಇದೆ. ಚಾಲಿ 43 000 ರೂ. ದಾಟುತ್ತಿದೆ. ಆದರೆ ಕೊಳೆ ರೋಗದಿಂದ ಹಾಗೂ ಮಳೆ ಹಾನಿಯಿಂದ ರೈತರ ಬಳಿ ಹೆಚ್ಚು ಫಸಲು ದಾಸ್ತಾನು ಇಲ್ಲ. ಮುಂದಿನ ವರ್ಷದ ಹಂಗಾಮಿನಲ್ಲಿ ಉತ್ತಮ ದರದ ನಿರೀಕ್ಷೆಯಲ್ಲಿ ರೈತರು ಇರುವಾಗಲೆ ಕೊಳೆ ರೋಗದ ಬಾಧೆ ಇದೀಗ ಮಲೆನಾಡು ಭಾಗದಲ್ಲಿ ಕಾಡುತ್ತಿದೆ.

ಉತ್ತಮ ಬೆಲೆ ಇದ್ದರೂ ಬೆಳೆ ಕಾಯ್ದುಕೊಳ್ಳಲು ಬಹುಪಾಲು ರೈತರಿಗೆ ಸಾಧ್ಯವಾಗಿಲ್ಲ. ದುಪ್ಪಟ್ಟು ಕೂಲಿದರ,ನಿರ್ವಹಣಾ ವೆಚ್ಚ ಹೆಚ್ಚಾಗಿದೆ. ಕೊಳೆ ರೋಗದಿಂದ ಹಾನಿ ಉಂಟಾದರೆ ಮುಂದಿನ ಹಂಗಾಮಿಗೆ ಮಾರುಕಟ್ಟೆಯಲ್ಲಿ ಅಡಿಕೆ ಆಮದು ಕಡಿಮೆಯಾಗಲೂಬಹುದು. ಇದು ರೈತರನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳಬಹುದು. ಹೀಗಾಗಿ ಪ್ರಸ್ತುತ ಮಾರುಕಟ್ಟೆ ದರ ಆಧರಿಸಿ ಕೊಳೆರೋಗಕ್ಕೆ ವಿಶೇಷ ಪರಿಹಾರ ನೀಡಬೇಕು ಎನ್ನುವುದು ಮಲೆನಾಡು ಅಡಿಕೆ ಬೆಳೆಗಾರರ ಒತ್ತಾಯವಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button