ಮದುವೆಯಾಗೋಲ್ಲ ಎಂಬ ಯುವತಿ ಬಿಂದು ಪ್ರತಿಜ್ಞೆಗೆ ಮಣಿದ ಜಿಲ್ಲಾಡಳಿತ…!

ದಾವಣಗೆರೆ: ತಾಲೂಕಿನ ಮಾಯಕೊಂಡದ ಹೆಚ್. ರಾಂಪುರ ಗ್ರಾಮಕ್ಕೆ ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಅವರು ಅಧಿಕಾರಿಗಳ ಜೊತೆ ತೆರಳಿ ಗ್ರಾಮಸ್ಥರೊಟ್ಟಿಗೆ ಮಾತುಕತೆ ನಡೆಸಿ, ಇನ್ನೊಂದು ವಾರದೊಳಗೆ ರಸ್ತೆ ನಿರ್ಮಾಣ ಮಾಡಿಕೊಡುವ ಭರವಸೆ ನೀಡಿದ್ದಾರೆ. ಜೊತೆಗೆ ಬಸ್ ಓಡಾಡಕ್ಕೂ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ರಸ್ತೆ ನಿರ್ಮಾಣ ಮಾಡಿ ತನ್ನ ಗ್ರಾಮಕ್ಕೆ ಬಸ್ ಬಾರದ ಹೊರತು ಮದುವೆಯಾಗೋಲ್ಲ ಎಂಬ ಶಪಥ ಮಾಡಿದ್ದ ಯುವತಿ ಬಿಂದು ಹೋರಾಟಕ್ಕೆ ಅಲ್ಪ ಮಟ್ಟಿಗೆ ಫಲ ಸಿಕ್ಕಂತಾಗಿದೆ. ಯುವತಿಯ ಪ್ರತಿಜ್ಞೆ ಸುದ್ದಿ ಎಲ್ಲೆಡೆ ವೈರಲ್ ಆಗ್ತಿದ್ದಂತೆ ಎಚ್ಚೆತ್ತ ಡಿಸಿ ಅವರು ಗ್ರಾಮಕ್ಕೆ ಭೇಟಿ ನೀಡಿ ಸಂಕಷ್ಟ ಆಲಿಸಿದರು. ಗ್ರಾಮಸ್ಥರ ಸಮಸ್ಯೆಗಳನ್ನು ಕಟ್ಟೆ ಮೇಲೆ ಕುಳಿತು ಕೇಳಿದ ಡಿಸಿ ಅವರು ನಾನೇ ಬಂದಿದ್ದೇನೆ. ನಿಮ್ಮ ಸಮಸ್ಯೆ ಬಗೆಹರಿಸುತ್ತೇನೆ ಎಂದು ಹೇಳುವ ಮೂಲಕ ಜನರನ್ನು ಸಂತೈಸುವ ಪ್ರಯತ್ನ ಮಾಡಿದರು.
ಘಟನೆ ಹಿನ್ನೆಲೆ:
ದಾವಣಗೆರೆ ತಾಲೂಕಿನ ಮಾಯಕೊಂಡದ ಹೆಚ್. ರಾಂಪುರದ ಯುವತಿ ಬಿಂದು ಈ ಪ್ರತಿಜ್ಞೆ ಮಾಡಿದ್ದಳು. ಈ ಸುದ್ದಿ ರಾಜ್ಯ ಮತ್ತು ರಾಷ್ಟ್ಟದ ಗಮನ ಸೆಳೆದಿತ್ತು. ಎಲ್ಲೆಡೆ ಸುದ್ದಿ ಪ್ರಸಾರವಾಗುತ್ತಿದ್ದಂತೆ ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಅವರು ಗ್ರಾಮಕ್ಕೆ ಅಧಿಕಾರಿಗಳ ಜೊತೆ ಭೇಟಿ ನೀಡಿ ಗ್ರಾಮಸ್ಥರ ಸಂಕಷ್ಟ ಆಲಿಸಿದರು. ಈ ವೇಳೆ ರಸ್ತೆ ನಿರ್ಮಾಣ ಮಾಡಿಕೊಡುವ ಭರವಸೆ ನೀಡಿದರು. ಈ ವೇಳೆ ಕಾಡು ಪ್ರಾಣಿಗಳ ಕಾಟ, ನೆಟ್ ವರ್ಕ್ ತೊಂದರೆ, ಗುಡ್ಡಗಾಡು ಪ್ರದೇಶದ ಸಂಕಷ್ಟಗಳು, ರಸ್ತೆ ಹಾಳಾಗಿರುವುದು, ಬಸ್ ಬಾರದಿರುವುದೂ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಗ್ರಾಮಸ್ಥರು ಡಿಸಿ ಗಮನಕ್ಕೆ ತಂದರು.
ಇದನ್ನೂ ಓದಿ : ರಸ್ತೆ ಡಾಂಬರೀಕರಣವಾಗಿ ಬಸ್ ಬರುವವರೆಗೂ ಮದುವೆಯಾಗಲಾರೆ; ಯುವತಿ ಪ್ರತಿಜ್ಞೆ
ರಸ್ತೆ ನಿರ್ಮಾಣಕ್ಕೆ ಒತ್ತಾಯಿಸಿ ಯುವತಿ ಬಿಂದು ಅವರು ಸಿಎಂ ಬಸವರಾಜ್ ಬೊಮ್ಮಾಯಿಗೂ ಪತ್ರ ಬರೆದಿದ್ದರು. ಯುವತಿ ಪತ್ರಕ್ಕೆ ಸ್ಪಂದಿಸಿದ್ದ ಸಿಎಂ ಬಸವರಾಜ್ ಬೊಮ್ಮಾಯಿ ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ರಸ್ತೆ ಸೇರಿದಂತೆ ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಪತ್ರ ಬರೆದಿದ್ದು, ಪತ್ರಕ್ಕೆ ಸಿಎಂ ಕಾರ್ಯದರ್ಶಿ ಪ್ರತಿಕ್ರಿಯೆ ನೀಡಿದ್ದರು. ಹೆಚ್. ರಾಂಪುರದಲ್ಲಿನ ರಸ್ತೆ ಅವ್ಯವಸ್ಥೆ ಬಗ್ಗೆ ಪತ್ರದಲ್ಲಿ ಅಳಲು ತೋಡಿಕೊಂಡಿದ್ದ ಬಿಂದುಗೆ ನಿಮ್ಮ ಪತ್ರ ಬಂದಿದೆ, ಆದಷ್ಟು ಬೇಗ ಕ್ರಮ ಕೈಗೊಳ್ಳಲಾಗುತ್ತೆ. ರಸ್ತೆ ನಿರ್ಮಾಣಕ್ಕೆ ಕ್ರಮ ತೆಗೆದುಕೊಳ್ಳಲಾಗುತ್ತೆ ಎಂಬ ಉತ್ತರ ಬಂದಿತ್ತು.ಪಿಎಂ ಸೇರಿದಂತೆ ಹಲವರಿಗೆ ಪತ್ರ ಬರೆದಿದ್ದ ಬಿಂದು ಅವರಿಗೆ ಯಾರೂ ಸ್ಪಂದನೆ ಮಾಡಿರಲಿಲ್ಲ, ಆದ್ರೆ ಬೊಮ್ಮಾಯಿ ಅವರಿಗೆ ಪತ್ರ ಬರೆದ ಮೇಲೆ ಸ್ಪಂದನೆ ಸಿಕ್ಕಿದ್ದು ಖುಷಿಯಾಗಿತ್ತು.
ಗ್ರಾಮದಲ್ಲಿ ಮೂಲಭೂತ ಸೌಕರ್ಯ ಇಲ್ಲದೇ ಸಂಕಷ್ಟ ಅನುಭವಿಸಿದ್ದ ಜನರಿಗೆ ಈಗ ಸ್ವಲ್ಪ ನೆಮ್ಮದಿ ತಂದಿದ್ದು, ಆದಷ್ಟು ಬೇಗ ರಸ್ತೆ ನಿರ್ಮಾಣ ಮಾಡಿಕೊಡುವಂತೆ ಗ್ರಾಮಸ್ಥರು ಡಿಸಿಯವರಲ್ಲಿ ಮನವಿ ಮಾಡಿದರು.



