ರಾಮನಗರ

ಮೇಕೆದಾಟು ಯೋಜನೆಗೆ ವಿಳಂಬ ಬೇಡ; ಮರಳವಾಡಿ ಮಠದ ಮೃತ್ಯುಂಜಯಸ್ವಾಮಿ ಆಗ್ರಹ

ಕನಕಪುರ: ಹಳೆ ಮೈಸೂರು ಭಾಗದ ಆರು ಜಿಲ್ಲೆಗಳಾದ ರಾಮನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರದ ಕುಡಿಯುವ ನೀರಿನ ದಾಹ ನೀಗಿಸುವಲ್ಲಿ ಮೇಕೇದಾಟು ಅಣೆಕಟ್ಟು ನಿರ್ಮಾಣ ಆಗಲೇಬೇಕು. ಈ ಅಣೆಕಟ್ಟು ನಿರ್ಮಾಣದಿಂದ ಕುಡಿಯುವ ನೀರಿನ ಬವಣೆ ತಪ್ಪುವ ಜೊತೆಗೆ 450 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುವುದಾಗಿ ಮರಳವಾಡಿ ಮಠದ ಮೃತ್ಯುಂಜಯ ಸ್ವಾಮಿ ತಿಳಿಸಿದ್ದಾರೆ.

ಕನಕಪುರದ ಚನ್ನಬಸಪ್ಪ ವೃತ್ತದ ಬಳಿ ಮೇಕೆದಾಟು ಅಣೆಕಟ್ಟು ನಿರ್ಮಾಣ ಹೋರಾಟ ಸಮಿತಿಯು ಅಣೆಕಟ್ಟು ನಿರ್ಮಾಣಕ್ಕೆ ಒತ್ತಾಯಿಸುವ ಪ್ರಚಾರ ರಥಯಾತ್ರೆಗೆ ಪೂಜೆ ಸಲ್ಲಿಸಿ ಮಾತನಾಡಿ, ತಾಲ್ಲೂಕಿನ ಗಡಿಭಾಗದಲ್ಲಿ ಈ ಅಣೆಕಟ್ಟು ನಿರ್ಮಾಣವಾದಲ್ಲಿ ಆ ಭಾಗದ ನೂರಾರು ಗ್ರಾಮಗಳಲ್ಲಿ ಅಂತರ್ಜಲ ವೃದ್ದಿಯಾಗಲಿದೆ ಇಲ್ಲಿ ಉತ್ಪಾದಿಸುವ ವಿದ್ಯುತ್‌ನಿಂದ ರೈತನ ಪಂಪ್ ಸೆಟ್‌ಗಳಿಗೆ ವಿದ್ಯುತ್ ಪೂರೈಕೆಯಾಗಿ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡಲಿದೆ ಆರು ಜಿಲ್ಲೆಗಳ ಜನರಿಗೆ ಕುಡಿಯುವ ನೀರಿಗೆ ಅನುಕೂಲವಾಗಲಿದ್ದು, ರಾಜ್ಯ ಹಾಗೂ ಕೇಂದ್ರ ಸರ್ಕಾರ ಈ ಭಾಗದ ಜನರ ಬವಣೆಯನ್ನು ಅರಿತು ತಡಮಾಡದೆ ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

ಮೇಕೇದಾಟು ಹೋರಾಟ ಸಮಿತಿಯ ಉಪಾಧ್ಯಕ್ಷೆ ಕಲ್ಪನಾ ಶಿವಣ್ಣ ಮಾತನಾಡಿ, ಮೇಕೇದಾಟು ಯೋಜನೆ ಜಾರಿಗೆ ಬರಲೇಬೇಕು, ಕುಡಿಯುವ ನೀರು ಹಾಗೂ ವಿದ್ಯುತ್ ಉತ್ಪಾದನೆ ಜೊತೆಗೆ ಅಂತರ್ ಜಲವೃದ್ದಿಗೆ ಈ ಅಣೆಕಟ್ಟು ನಿರ್ಮಾಣವಾಗಲೇಬೇಕು ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ಯೋಜನೆಗೆ ಮೀನಾಮೇಷ ಎಣಿಸದೆ ಕೂಡಲೇ ಅನುಮತಿ ನೀಡಿ ಕಾಮಗಾರಿಗೆ ಚಾಲನೆ ನೀಡದಿದ್ದರೆ ಉಗ್ರ ಹೋರಾಟ ಅನಿವಾರ್ಯವೆಂದು ತಿಳಿಸಿದರು.

ಹೋರಾಟ ಸಮಿತಿಯ ಪ್ರದಾನ ಕಾರ್ಯದರ್ಶಿ ಹಾರೋಹಳ್ಳಿ ಎಂ. ಮಲ್ಲಪ್ಪ ಮಾತನಾಡಿ, ಕುಡಿಯುವ ನೀರು, ವಿದ್ಯುತ್ ಉತ್ಪಾದನೆ ಹಾಗೂ ಅಂತರ್ಜಲ ವೃದ್ದಿಗೆ ಸಹಕರಿಯಾಗಲಿರುವ ಮೇಕೇದಾಟು ಯೋಜನೆ ಕಾಮಗಾರಿ ಶೀಘ್ರ ಪ್ರಾರಂಭವಾಗಲೇಬೇಕು ಕುಡಿಯುವ ನೀರಿಗೆ ರಾಜಕೀಯ ಬೇಡ, ಲಕ್ಷಾಂತರ ಜನರ ಕುಡಿಯುವ ನೀರಿನ ಬವಣೆ ನೀಗಿಸುವ ಈ ಯೋಜನೆ ಕೂಡಲೇ ಪ್ರಾರಂಭವಾಗಲೇಬೇಕು. ಇದು ಜನರ ಹಕ್ಕೋತ್ತಾಯ ಕೂಡ ಈ ಯೋಜನೆಯನ್ನು ರಾಜ್ಯ ಸರ್ಕಾರ ಕೂಡಲೇ ಕೈಗೆತ್ತಿಕೊಳ್ಳಲು ಒತ್ತಾಯಿಸಿ ಜಿಲ್ಲೆಯ ಸಹಸ್ರಾರು ಜನ ವಿಧಾನಸೌಧಕ್ಕೆ ಪಾದಯಾತ್ರೆ ಮೂಲಕ ಸರ್ಕಾರದ ಗಮನ ಸೆಳೆಯುವುದಾಗಿ ತಿಳಿಸಿದರು.

ಬಿಲ್ವಪತ್ರ ಮಠ ಶ್ರೀ ಶಿವಲಿಂಗಸ್ವಾಮೀಜಿ, ಹೊರಳಗಲ್ಲು ಮಠದ ಮಹಂತೇಶ್ ಸ್ವಾಮೀಜಿ, ಹೋರಾಟ ಸಮಿತಿ ಅಧ್ಯಕ್ಷ ಸಂಪತ್, ಖಜಾಂಜಿ ಮಧುಸೂದನ್, ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ಅಧ್ಯಕ್ಷ, ನರಸಿಂಹಯ್ಯ ಕಾರ್ಯದರ್ಶಿ ಭೈರಯ್ಯ, ರೈತ ಸಂಘದ ಮುಖಂಡರಾದ ಜಗದೀಶ್ ರಾವ್, ಮಹಿಳಾ ಸಂಘದ ಅಧ್ಯಕ್ಷೆ ಮಾರಮ್ಮ ಸರಸ್ವತಿ, ಮಂಗಳ, ಸಾಕಮ್ಮ ಅನೇಕ ರೈತ ಮುಖಂಡರು ಭಾಗವಹಿಸಿದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button