ಅನಧಿಕೃತ ದೇಗುಲಗಳ ತೆರವು: ಶೀಘ್ರವೇ ಸರ್ಕಾರದಿಂದ ಸ್ಪಷ್ಟ ನಿರ್ಧಾರ: ಸಚಿವ ಆರ್. ಅಶೋಕ್

ಬೆಂಗಳೂರು: ತೀವ್ರ ವಿವಾದಕ್ಕೆ ಎಡೆ ಮಾಡಿಕೊಟ್ಟಿರುವ ದೇವಸ್ಥಾನಗಳ ತೆರೆವು ಕಾರ್ಯಾಚರಣೆಯನ್ನು ಸರ್ಕಾರದಿಂದ ಮುಂದಿನ ಸೂಚನೆ ಬರುವವರಿಗೆ ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿಗಳು ಮತ್ತು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯಾಲಯದ ನಿರ್ದೇಶನಗಳನ್ನು ಸರ್ಕಾರ ಕೂಲಂಕುಷವಾಗಿ ಪರಿಶೀಲನೆ ನಡೆಸಲಿದೆ. ಮುಂದೇನು ಮಾಡಬೇಕು ಎಂದು ಸರ್ಕಾರ ನಿರ್ದೇಶನ ನೀಡುವವರೆಗೆ ದೇವಸ್ಥಾನಗಳ ತೆರೆವು ಕಾರ್ಯಾಚರಣೆ ನಡೆಸುವ ಅಗತ್ಯವಿಲ್ಲ ಎಂದರು.
ದಿಢೀರೆಂದು ದೇವಸ್ಥಾನಗಳನ್ನು ತೆರೆವುಗೊಳಿಸುವುದರಿಂದ ಜನರ ಭಾವನೆಗಳಿಗೆ ಧಕ್ಕೆಯಾಗಲಿದೆ. ಕೆಲವು ಕಡೆ ದೇವಸ್ಥಾನಗಳನ್ನು ತೆರೆವುಗೊಳಿಸುತ್ತಿರುವುದರಿಂದ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ ಎಂದು ಸಚಿವ ಅಶೋಕ್ ಹೇಳಿದರು.
ಮೈಸೂರು ಜಿಲ್ಲೆ ಹುಣಸೂರಿನಲ್ಲಿ ಪುರಾತನ ದೇವಾಲಯವನ್ನು ಜಿಲ್ಲಾಡಳಿತ ತೆರೆವುಗೊಳಿಸಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ಸಂಬಂಧ ಜಿಲ್ಲಾಧಿಕಾರಿ ಮತ್ತು ತಹಸೀಲ್ದಾರ್ ಜತೆ ಮಾತನಾಡಿ ಮಾಹಿತಿ ಪಡೆಯುತ್ತೇನೆ. ಜನತೆ ಯಾವುದೇ ಕಾರಣಕ್ಕೂ ಆಕ್ರೋಶಕ್ಕೆ ತುತ್ತಾಗಬಾರದು ಎಂದು ಮನವಿ ಮಾಡಿದರು.
