ಸಿದ್ದಾಪುರದಲ್ಲೊಂದು ಅಪರೂಪದ ಘಟನೆ : ಮನೆಯವರ ಜೊತೆ ಮನೆ ಮಗಳಾದ ಆಕಳ ಕರು

ಕಾರವಾರ : ಹೆತ್ತವರಿಗೆ ಹೆಗ್ಗಣ ಮುದ್ದು ಅನ್ನೋ ಗಾದೆಯೊಂದಿದೆ. ಅದರಂತೆ ಮನುಷ್ಯರೇ ಇರಲಿ ಅಥವಾ ಪ್ರಾಣಿಗಳೇ ಇರಲಿ, ಹುಟ್ಟಿದ ಯಾವುದೇ ಮಗುವಾದರೂ ಕೂಡ ತಾಯಿಯ ಮಮತೆ ಆ ಮಗುವಿಗೆ ಮುಖ್ಯವಾಗಿರುತ್ತದೆ. ಆದರೆ ಹುಟ್ಟಿದ ಎರಡೇ ದಿನಕ್ಕೆ ತಾಯಿಯನ್ನು ಕಳೆದುಕೊಂಡ ಕರುವೊಂದು ಮನೆಯ ಜನರ ಜೊತೆ ತಾಯಿ ಪ್ರೀತಿಯನ್ನು ಕಂಡುಕೊಂಡು ಮನೆಯವರ ಜೊತೆ ಮನೆ ಮಗಳಾಗಿ ಮನೆಯಲ್ಲೇ ವಾಸಿಸುತ್ತಿರುವ ಅಪರೂಪದ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಮನೆಯೊಂದರಲ್ಲಿ ಕಾಣ ಸಿಗುತ್ತದೆ.
ಸಿದ್ದಾಪುರ ತಾಲೂಕಿನ ಬಾಳೂರಿನ ಮಂಜುನಾಥ್ ಭಟ್ ಎಂಬವರ ಮನೆಯ ಪುಟ್ಟ ಕರುವಿನ ಕಥೆ ಕೇಳಿದರೆ ಕಣ್ಣಲ್ಲಿ ನೀರು ಬರುತ್ತದೆ. ಈ ಮನೆಯ ಹಸುವೊಂದು ಕರು ಹಾಕಿ ಕೇವಲ ಎರಡೇ ದಿನಗಳಲ್ಲಿ ತೀರಿಕೊಂಡಿತು. ಆಗಷ್ಟೇ ಜನಿಸಿದ್ದ ಕರು ತಾಯಿಯ ಮಮತೆಯಿಂದ ದೂರವಾಗೋ ಸಂದರ್ಭ ಬಂದೊದಗಿತು. ಇದನ್ನು ಕಂಡ ಮನೆಯವರು ಆ ಕರುವಿಗೆ ತಾಯಿಯ ಮಮತೆ ಕೊರತೆ ಆಗಬಾರದು ಎಂಬ ಕಾರಣಕ್ಕೆ ಆ ಕರುವನ್ನು ಮನೆಯ ಮಗಳಂತೆ ಸಾಕೋಕೆ ನಿರ್ಧರಿಸಿದರು.
ಅಂದಿನಿಂದ ಈ ಮುದ್ದಾದ ಪುಟ್ಟ ಕರು ಮನೆಯ ಓರ್ವ ಸದಸ್ಯಳಾಗಿ ಮನೆಯಲ್ಲಿದೆ. ಈ ಕರುವಿಗೆ ಮನೆಯೇ ಕೊಟ್ಟಿಗೆ. ಮನುಷ್ಯರು ಸೇವಿಸೋ ಆಹಾರವೇ ಇದಕ್ಕೆ ತಿಂಡಿ. ಯಜಮಾನನ ಹಾಸಿಗೆಯೇ ಈ ಕರು ಮಲಗುವ ಜಾಗ. ಈ ಕರು ತಾಯಿಯ ಹೊಟ್ಟೆಯಲ್ಲಿದ್ದಾಗಲೇ ಇದಕ್ಕೆ ಆದ್ಯಾ ಅಂತ ಹೆಸರಿಟ್ಟಿದ್ದಾರೆ.
ಈ ಪುಟ್ಟ ಕರು ಗೀರ್ ತಳಿಗೆ ಸೇರಿದ ಹಸುವಾಗಿದ್ದು, ಬೇರೆ ಹಾಲು ಕುಡಿಸಿದ್ದರ ಪರಿಣಾಮವಾಗಿ ಕರುವಿನ ಕೂದಲು ಉದುರಲಾರಂಭಿಸಿತು. ಇದನ್ನು ನೋಡಿದ ಮನೆಯವರು ವೈದ್ಯರನ್ನು ಸಂಪರ್ಕಿಸಿ ಔಷಧವನ್ನು ಮಾಡಿದರು. ಈ ಕರು ವಾಸಿಸೋದು ಕೂಡ ಮನೆಯಲ್ಲಿಯೇ. ಮನೆಯ ತುಂಬೆಲ್ಲ ಮನುಷ್ಯರು ಓಡಾಡಿದಂತೆ ಓಡಾಡುತ್ತಿರುತ್ತದೆ. ಬೆಳಿಗ್ಗೆ ಅಡುಗೆ ಮನೆಯಲ್ಲಿ ತಿಂಡಿ ಮಾಡೋವಾಗ ಅಲ್ಲಿಯೇ ಬಂದು ಕುಳಿತುಕೊಳ್ಳೋ ಈ ಕರು, ಮಲಗೋದು ಕೂಡ ಮನೆಯ ಯಜಮಾನನ ಜೊತೆ.
ಯಾರೂ ಗಮನಿಸದಿದ್ದರೆ ಮನೆಯಲ್ಲಿರುವ ತರಕಾರಿಗಳನ್ನು ತಿಂದು ಮುಗಿಸಿ ಬಿಡುತ್ತದೆ.ಮಲ ಮೂತ್ರಗಳು ಬಂದಾಗ ಸೂಚಿಸೋ ಕರುವನ್ನು ಹೊರಗಡೆ ಕರೆದುಕೊಂಡು ಹೋಗಿ ಬರಲಾಗುತ್ತದೆ. ಕರುವಿಗೆ ಸ್ನಾನವನ್ನು ಕೂಡ ಬಚ್ಚಲು ಮನೆಯಲ್ಲಿಯೇ ಮಾಡಿಸಲಾಗುತ್ತದೆ.
ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದರೆ ಮನುಷ್ಯರಂತೆಯೇ ಈ ಕರು ಅಳುತ್ತದೆ. ಕಟ್ಟಿ ಹಾಕಿದ ಹಗ್ಗವನ್ನು ಎಳೆದುಕೊಂಡು ಬರುತ್ತದೆ. ಆದ್ದರಿಂದ ಕರುವನ್ನು ಮನೆಯಲ್ಲಿಯೇ ಸಾಕಲಾಗುತ್ತಿದೆ. ಈ ಆದ್ಯಾ ಅಂದರೆ ಮನೆಯವರಿಗೆಲ್ಲರಿಗೂ ಅಚ್ಚುಮೆಚ್ಚು. ಮನೆಯ ಮಕ್ಕಳಂತೂ ಈ ಕರುವನ್ನು ತುಂಬಾ ಹಚ್ಚಿಕೊಂಡಿದ್ದು,ದಿನವೂ ಇದರ ಜೊತೆ ಆಟ ಆಡುತ್ತಾರೆ.




