Latestಅಂಕಣಗಳುರಾಜಕೀಯರಾಷ್ಟ್ರೀಯ

ಸಿಎಂ ಹುದ್ದೆ: ಹೇಳಿದ್ದನ್ನು ಮಾಡುವವನಷ್ಟೇ ಬೇಕು ಬಿಜೆಪಿ ಹೈಕಮಾಂಡ್​ಗೆ

ಎಂ ಹೈದರ್

ಗುಜರಾತಿನ ಹೊಸ ಮುಖ್ಯಮಂತ್ರಿಯಾಗಿ ನೇಮಕವಾಗಿರುವ ಭೂಪೇಂದ್ರ ಪಟೇಲ್ ಅಚ್ಚರಿಯ ಆಯ್ಕೆ ಎಂದೇ ಎಲ್ಲೆಡೆ ವಿಶ್ಲೇಷಣೆ ನಡೆಯುತ್ರಿದೆ. ಸರ್ಕಾರ ನಡೆಸಿರುವ ಅನುಭವ ಬಿಡಿ ಮಂತ್ರಿಯೂ ಆಗದ ಮೊದಲ ಬಾರಿಗೆ ಘಾಟ್ ಲೋಡಿಯಾದಿಂದ ಆಯ್ಕೆಯಾಗಿದ್ದ ಶಾಸಕ ಭೂಪೇಂದ್ರ ಪಟೇಲ್ ಈಗ ಗುಜರಾತ್ ಮುಖ್ಯಮಂತ್ರಿಯಾಗಿ ನೇಮಕ ಮಾಡಿರುವ ಏಕೈಕ ಉದ್ದೇಶ 2022ರ ಚುನಾವಣೆಯಲ್ಲಿ ಪಾಟೀದಾರ್ ಸಮುದಾಯದ ಮತಗಳನ್ನು ಸೆಳೆಯುವುದು ಮತ್ತು ತನ್ನ ಇಷಾರೆಯಂತೆ ಕೆಲಸ ಮಾಡಲು ಮತ್ತು ಪಾಟೀದಾರ್ ಸಮುದಾಯದ ಅಸಮಾಧಾನ ಸರಿಪಡಿಸಲು ದೊಡ್ಡ ಸಮುದಾಯದ ಚಿಕ್ಕ ಪ್ರೊಫೈಲ್ ಇರುವ ಭೂಪೇಂದ್ರ ಪಟೇಲ್ ರನ್ನು ಮುಖ್ಯಮಂತ್ರಿಯನ್ನಾಗಿ ನೇಮಕ ಮಾಡಲಾಗಿದೆ.

ಭೂಪೇಂದ್ರ ಪಟೇಲ್ ಓದಿರುವುದು ಎಂಜಿನಿಯರಿಂಗ್. ವಯಸ್ಸು 59 ವರ್ಷ. ಮಾಜಿ ಸಿಎಂ ಆನಂದಿಬೆನ್ ಪಟೇಲ್ ಅವರ ಅನುಯಾಯಿ. ಇಷ್ಟರ ಜೊತೆಗೆ  ಹೆಚ್ಚು ಕಡಿಮೆ ನಾಲ್ಕು ವರ್ಷಗಳ ಕಾಲ ಶಾಸಕರಾಗಿರುವ ಅನುಭವ. ಗುಜರಾತ್ ಸಿಎಂ ಆಗಿ ಆಯ್ಕೆಗೆ ಇಷ್ಟು ಸಾಕಾಗಿದೆ.

ಗುಜರಾತ್ ನಲ್ಲಿ ರಾಜ್ಯ ಸರ್ಕಾರವನ್ನು ಶಾಸನಸಭೆಯ ಒಬ್ಬ ಚುನಾಯಿತ ಮುಖ್ಯಮಂತ್ರಿ ಅಧಿಕಾರ ನಡೆಸುವುದಕ್ಕೆ ಬಿಜೆಪಿ ಎಂದೋ ತಿಲಾಂಜಲಿ ಇಟ್ಟಿದೆ. ಅದಕ್ಕೆ ರಾಜ್ಯದಲ್ಲಿ ಪ್ರಭಾವ ಇರುವ ನಾಯಕ ಬೇಕಾಗಿಲ್ಲ. ತನ್ನ ಆದೇಶವನ್ನು ಚಾಚೂ ತಪ್ಪದೆ ಪಾಲಿಸುವ ಒಬ್ಬ ಗುಮಾಸ್ತನನ್ನಷ್ಟೆ ನೇಮಿಸಿಕೊಳ್ಳುತ್ತದೆ. ಇದಕ್ಕೆ ಮತ್ತೊಂದು ಸೇರ್ಪಡೆ ಈಗ ಗುಜರಾತ್ ಗೆ ಹೊಸ ಮುಖ್ಯಮಂತ್ರಿಯಾಗಿ ನೇಮಕವಾಗಿರುವ ಈ ಭೂಪೇಂದ್ರ ಪಟೇಲ್.

ಹಾಗೆ ನೋಡಿದರೆ ಇಡೀ ದೇಶದಲ್ಲಿ ಯಾವುದೇ ಪಕ್ಷವೂ ಮುಖ್ಯಮಂತ್ರಿಯನ್ನು ಶಾಸನಸಭೆ ಸೇರಿ ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಎಂದೋ ಮುಗಿಸಿ ಹಾಕಿವೆ. ಜಾತಿ ಸಮುದಾಯದ ಜೊತೆ ಹೈಕಮಾಂಡ್ ಮುಂದೆ ತಲೆಬಾಗಿ ನಿಲ್ಲುವವನನ್ನೆ ಮುಖ್ಯಮಂತ್ರಿ ಮಾಡಲು ಬಹುತೇಕ ಎಲ್ಲ ಪಕ್ಷಗಳು ಬಯಸುತ್ತವೆ. ಬಿಜೆಪಿ ಇದರಲ್ಲೂ ಒಂದು ಹೆಜ್ಜೆ ಮುಂದೆ ಹೋಗಿ ರಾಜ್ಯಕ್ಕೆ ತನ್ನ ಇಷಾರೆಯಿಂದ ಕೆಲಸ ಮಾಡುವವನನ್ನಷ್ಟೆ ನೇಮಿಸುತ್ತದೆ. ತನ್ನದೇ ಇಷಾರೆಯಿಂದ ಕೆಲಸ ಮಾಡಿ ಆಡಳಿತ ವಿಫಲವಾದಾಗ ಅದನ್ನು ಅವನದೇ ತಲೆಗೆ ಕಟ್ಟಿ ಮತ್ತೊಬ್ಬನನ್ನು ನೇಮಿಸಿಕೊಂಡು ಜನರ ಕಣ್ಣಿಗೆ ಮಣ್ಣೆರಚಿ ಮತ್ತೆ ಮತ್ತೆ ಅಧಿಕಾರ ಹೊಂದುವ ಉದ್ದೇಶ ಮಾತ್ರ ಇದರಲ್ಲಿದೆ.

ಬಿಜೆಪಿಗೆ ತನ್ನದೇ ಪಕ್ಷದ ಪ್ರಾದೇಶಿಕ ನಾಯಕರನ್ನು ದುರ್ಬಲಗೊಳಿಸಿ ಏಕಚಕ್ರಾದಿಪತ್ಯವನ್ನು ಹೇರುವ ಚಿಕ್ಕ ಅವಕಾಶವನ್ನು ಕಳೆದುಕೊಳ್ಳದೆ ತನ್ನ ಕಾರ್ಯಸಾಧನೆ ಮಾಡುತ್ತಿದೆ. ಉತ್ತರಾಖಂಡದ ಪರಿಸ್ಥಿತಿಯೂ ಇದರಲ್ಲಿ ಭಿನ್ನವಿಲ್ಲ ಕರ್ನಾಟಕದಲ್ಲಿಯೂ ಬೊಮ್ಮಾಯಿಯನ್ನು ಮುಖ್ಯಮಂತ್ರಿಯಾಗಿ ನೇಮಕ ಮಾಡಿ ಮೋದಿ ಶಾ ಜೋಡಿ ಇದನ್ನು ಸದ್ದಿಲ್ಲದೆ ಸಾಧಿಸಿದೆ.

ಅಮಿತ್ ಶಾ ಆಪ್ತ ಮತ್ತು ಅವರದೇ ಜೈನ ಸಮುದಾಯಕ್ಕೆ ಸೇರಿದ ವಿಜಯ್ ರೂಪಾನಿ ಮೋದಿ ಶಾ ನಿರ್ದೇಶನದಂತೆ ಕೆಲಸ ಮಾಡಿದರು. ಆಡಳಿತದ ವೈಫಲ್ಯಗಳಿಗೆ ಈಗ ವಿಜಯ್ ರೂಪಾನಿಯನ್ನೆ ಹೊಣೆಯಾಗಿಸಲಾಗಿದೆ. ಇದೇ ರೀತಿಯಲ್ಲಿ ಮುಂದಿನ ಹದಿನೈದು ತಿಂಗಳ ನಂತರ ನಡೆಯುವ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೆಲಕಚ್ಚಿದರೆ ಇದೆ ಭೂಪೇಂದ್ರ ಪಟೇಲ್ ಸೋಲಿನ ಹೊಣೆ ಹೊರಬೇಕಾಗುತ್ತೆ.

ಒಟ್ಟಿನಲ್ಲಿ ಬಿಜೆಪಿ ಹೈಕಮಾಂಡ್ ದೇಶದಲ್ಲಿ ನೆಲಕಚ್ಚಿರುವ ಆರ್ಥಿಕತೆ, ಗಗನಕ್ಕೇರಿದ ಅಗತ್ಯ ವಸ್ತುಗಳ ಬೆಲೆಗಳು, ಅತಿಯಾದ ನಿರುದ್ಯೋಗ ಸಮಸ್ಯೆ, ಕೊರೊನಾ ನಿಭಾಯಿಸುವಲ್ಲಿನ ಎಡವಟ್ಟು ರೈತರ ಆತ್ಮಹತ್ಯೆಯಂತಹ ತನ್ನ ವೈಫಲ್ಯಗಳನ್ನು ಮರೆಮಾಚಲು ಮುಖ್ಯಮಂತ್ರಿ ಬದಲಾವಣೆಯಂತಹ ಹಲವು ರೀತಿಯ ಪ್ರಯೋಗದಲ್ಲಿ ತೊಡಗಿದೆ. ಜನ ಎಚ್ಚೆತ್ತುಕೊಳ್ಳಬೇಕಷ್ಟೆ.

Spread the love

Related Articles

Leave a Reply

Your email address will not be published. Required fields are marked *

Back to top button