Breaking NewsLatestಕೊಡಗುರಾಜ್ಯ

ಮೈಸೂರು ದಸರಾ: ಜಂಬೂ ಸವಾರಿಗೆ ಆಯ್ಕೆಯಾಗಿದ್ದ ಕೊಡಗಿನ ಐದು ಆನೆಗಳಿಗೆ ಬೀಳ್ಕೊಡುಗೆ

ಕೊಡಗು : ಈ ಸಲ ಮೈಸೂರು ದಸರಾದಲ್ಲಿ ಜಂಬೂ ಸವಾರಿಗೆ ಆಯ್ಕೆಯಾಗಿರುವ ಕೊಡಗಿನ ಐದು ಆನೆಗಳನ್ನು ಬೀಳ್ಕೊಡಲಾಗಿದೆ. ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾದ ದುಬಾರೆ ಸಾಕಾನೆ ಶಿಬಿರದಿಂದ ಮೈಸೂರು ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ಭಾನುವಾರದಂದು ಗಜಪಯಣಕ್ಕೆ ಚಾಲನೆ ನೀಡಲಾಯಿತು.

ಬೆಳಗ್ಗೆ ಮಾವುತರು ಆನೆಗಳನ್ನು ತೊಳೆದು ಸರಳವಾಗಿ ಶೃಂಗರಿಸಿದ್ದರು. ಮಧ್ಯಾಹ್ನ 3 ಗಂಟೆ ವೇಳೆಗೆ ಅವುಗಳಿಗೆ ಪೂಜೆ ಸಲ್ಲಿಸಿ ಶಿಬಿರದಿಂದ ಬೀಳ್ಕೊಡಲಾಯಿತು. ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ದುಬಾರೆ ಸಾಕಾನೆ ಶಿಬಿರದಿಂದ ಮೂರು ಆನೆಗಳು ಆಯ್ಕೆ ಆಗಿದ್ದವು. ಪಟ್ಟದ ಆನೆ ವಿಕ್ರಮ ಮತ್ತು ಕಾವೇರಿ ಜೊತೆಗೆ ಧನಂಜಯ ಆನೆಗಳು ಈ ಬಾರಿಯ ಮೈಸೂರು ದಸರಾ ಜಂಭೂ ಸವಾರಿಗೆ ಆಯ್ಕೆಯಾಗಿದ್ದವು.

ಅಂಬಾರಿ ಹೊರಲಿರುವ ಅಭಿಮನ್ಯು ಆನೆ ಮತ್ತು ಗೋಪಾಲಸ್ವಾಮಿ ಆನೆಗಳು ವಿರಾಜಪೇಟೆ ತಾಲ್ಲೂಕಿನ ಮತ್ತಿಗೋಡು ಸಾಕಾನೆ ಶಿಬಿರದಿಂದ ಆಯ್ಕೆಯಾಗಿವೆ. ದುಬಾರೆ ಸಾಕಾನೆ ಶಿಬಿರದಲ್ಲಿ ಧನಂಜಯ, ಕಾವೇರಿ ಮತ್ತು ವಿಕ್ರಮ ಆನೆಗಳಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಬಳಿಕ ಬೀಳ್ಕೊಟ್ಟರು.

ಪ್ರತೀ ಬಾರಿ ಜಿಲ್ಲೆಯಿಂದ ಏಳರಿಂದ ಎಂಟು ಆನೆಗಳು ದಸರಾದಲ್ಲಿ ಭಾಗವಹಿಸುತ್ತಿದ್ದವು. ಆದರೆ ಈ ಬಾರಿ ಕೋವಿಡ್ ಸೋಂಕಿರುವ ಹಿನ್ನೆಯಲ್ಲಿ ಕೇವಲ ಐದು ಆನೆಗಳನ್ನು ಮಾತ್ರವೇ ಆಯ್ಕೆ ಮಾಡಲಾಗಿದೆ.

ವಿಶೇಷವೆಂದರೆ ಪ್ರತೀ ಬಾರಿ ದಸರಾಕ್ಕೆ ತೆರಳುವಾಗ ಲಾರಿ ಏರಲು ಆನೆಗಳು ಹಠ ತೋರಿಸುತ್ತಿದ್ದವು. ಆದರೆ ಈ ಬಾರಿ ಆನೆಗಳು ಮಾತ್ರ ಯಾವುದೇ ಕಿರಿಕಿರಿ ಮಾಡದೆ ಸಲೀಸಾಗಿ ಲಾರಿ ಏರಿ ನಿಂತವು. ಇನ್ನೂ ಕೋವಿಡ್ ಸೋಂಕಿನ ಆತಂಕದಿಂದಲೇ ಆನೆಗಳೊಂದಿಗೆ ಕೇವಲ ಮಾವುತರು ಮತ್ತು ಕವಾಡಿಗರಿಗೆ ಮಾತ್ರವೇ ಮೈಸೂರಿಗೆ ತೆರಳಲು ಅವಕಾಶ ನೀಡಲಾಗಿದೆ.

ನಂತರ ಮೈಸೂರು ದಸರಾ ಉತ್ಸವದದಲ್ಲಿ ಪಾಲ್ಗೊಳ್ಳಲು ಗಜ ಪಡೆಗಳು ಹುಣಸೂರು ತಾಲ್ಲೂಕಿನ ವೀರನಹೊಸಳ್ಳಿಗೆ ಪ್ರಯಾಣ ಬೆಳೆಸಿದವು.
ಈ ಸಂದರ್ಭ ದುಬಾರೆ ಉಪ ವಲಯ ಅರಣ್ಯಾಧಿಕಾರಿ ರಂಜನ್, ಸಿಬ್ಬಂದಿ ಹಾಗೂ ಮಾವುತರು ಹಾಗೂ ಕಾವಾಡಿಗರು ಹಾಜರಿದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button