ಗಣೇಶ ವಿಸರ್ಜನೆ ವೇಳೆ ಎಡವಟ್ಟು : ಆಭರಣ ಸಮೇತ ವಿಸರ್ಜಿಸಿ ಪೇಚಿಗೆ ಬಿದ್ದ ಗ್ರಾಮಸ್ಥರು !

ಕಾರವಾರ : ಸಾರ್ವಜನಿಕ ಗಣಪತಿಯನ್ನು ವಿಸರ್ಜಿಸುವ ವೇಳೆ ಗಣೇಶ ಮೂರ್ತಿಗೆ ತೊಡಿಸಿದ್ದ ಚಿನ್ನದ ಉಂಗುರ ಹಾಗೂ ಬೆಳ್ಳಿ ಸರಪಳಿ ಸಮೇತ ಆಭರಣಗಳನ್ನು ಗಣಪತಿಯೊಂದಿಗೆ ಕೆರೆಯಲ್ಲಿ ವಿಸರ್ಜಿಸಿದ ಗ್ರಾಮಸ್ಥರು ಹಾಗೂ ಸಂಘಟಕರು ಪೇಚಿಗೆ ಸಿಲುಕಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ಸಮೀಪದ ತೊರ್ಕೆ ಗ್ರಾ.ಪಂ.ವ್ಯಾಪ್ತಿಯ ಗೊನೆಹಳ್ಳಿಯಲ್ಲಿ ನಡೆದಿದೆ.
ಇಂದು ವಿದ್ಯುಕ್ತವಾಗಿ ಗಣಪತಿಗೆ ಪೂಜೆ ಸಲ್ಲಿಸಿ ಸಮೀಪದ ಕೆರೆಗೆ ತಂದ ಗೊನೆಹಳ್ಳಿ ಗ್ರಾಮಸ್ಥರು ದೇವರಿಗೆ ಹಾಕಿದ್ದ ಉಂಗುರ,ಬೆಳ್ಳಿ ಸರಪಳಿ ತೆಗೆಯುವುದನ್ನು ಮರೆತಿದ್ದರು.ಈ ವೇಳೆ ಗಣಪತಿಯನ್ನು ಕೆರೆಯ ನಡುಭಾಗದಲ್ಲಿ ವಿಸರ್ಜಿಸಲಾಗಿತ್ತು.ನಂತರ ಮರಳಿ ಬಂದಾಗ ಗಣೇಶನಿಗೆ ಹಾಕಿದ್ದ ಆಭರಣಗಳು ಕಾಣದಾದಾಗ ತಾವು ಮಾಡಿದ ತಪ್ಪಿನ ಅರಿವಾಗಿದೆ.
ಕೆಲವರು ನೀರಿನಲ್ಲಿ ಮುಳುಗಿ ಹುಡುಕುವ ಪ್ರಯತ್ನ ಮಾಡಿದರೂ ಕೈ ಚೆಲ್ಲಿ ಕೂರುವಂತಾಯಿತು.ನಂತರ ದೇವರಭಾವಿ ಗ್ರಾಮದ ಯುವಕ ವಿನಯ್ ನಾಯಕ ಎಂಬುವವರು ಸ್ಕೂಬಾ ಡೈಗೆ ಬಳಸುವ ಪರಿಕರ ಬಳಸಿ ನೀರಿನಲ್ಲಿ ಮುಳುಗಿ ಕೊನೆಗೂ ಗಣಪತಿಯೊಂದಿಗೆ ವಿಸರ್ಜಿಸಿದ ಆಭರಣಗಳನ್ನು ತೆಗೆದುಕೊಟ್ಟರು.




