ಗುಜರಾತ್ ನೂತನ ಸಿಎಂ ಆಗಿ ಭೂಪೇಂದ್ರ ಪಟೇಲ್; ಸೋಮವಾರ ಪ್ರಮಾಣವಚನ

ಗಾಂಧಿನಗರ: ಗುಜರಾತ್ ನೂತನ ಮುಖ್ಯಮಂತ್ರಿಯಾಗಿ ಹಿರಿಯ ಬಿಜೆಪಿ ನಾಯಕ, ಮಾಜಿ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡವರಾದ ಭೂಪೇಂದ್ರ ಪಟೇಲ್ ಆಯ್ಕೆಯಾಗಿದ್ದಾರೆ. ಅವರು ನಾಳೆಯೇ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಸಂಜೆ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಅಚ್ಚರಿಯ ಆಯ್ಕೆಯಾಗಿ ಭೂಪೇಂದ್ರ ಪಟೇಲ್ ಹೆಸರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಕಟಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಅಮಿತ್ ಶಾ ಅವರ ಆಯ್ಕೆ ಇದೆನ್ನಲಾಗಿದೆ.
ಆನಂದಿಬೆನ್ ಪಟೇಲ್ ಅವರ ಕ್ಷೇತ್ರವಾಗಿದ್ದ ಘತ್ಲೋಡಿಯ ಶಾಸಕರಾಗಿರುವ ಪಟೇಲ್, ಅಚ್ಚರಿಯ ಆಯ್ಕೆಯಾಗಿದ್ದು, ಪಟೇಲ್ ಸಮುದಾಯವನ್ನು ಸೆಳೆಯುವ ಉದ್ದೇಶ ಈ ಆಯಕೆಯ ಹಿಂದಿದೆ ಎನ್ನಲಾಗಿದೆ.
ಶಾಸಕಾಂಗ ಸಭೆಗೂ ಮೊದಲು ಕೇಂದ್ರ ಸಚಿವರಾದ ಮನ್ಸುಖ್ ಮಂಡಾವಿಯ, ಪರ್ಶೋತ್ತಮ್ ರೂಪಾಲ, ವಿವಾದಿತ ಲಕ್ಷದ್ವೀಪ ಆಡಳಿತಗಾರ ಪ್ರಫುಲ್ ಖೋಡಾ ಪಟೇಲ್ ಹಾಗೂ ರಾಜ್ಯ ಕೃಷಿ ಸಚಿವ ಆರ್ಸಿ ಫಲ್ಡು ಅವರ ಹೆಸರುಗಳು ರೇಸ್ನಲ್ಲಿದ್ದವು.
ಚುನಾವಣೆಗೆ ಇನ್ನು 15 ತಿಂಗಳುಗಳಷ್ಟೇ ಬಾಕಿಯಿರುವಾಗ ಶನಿವಾರ ವಿಜಯ್ ರೂಪಾನಿ ಗುಜರಾತ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕೋವಿಡ್ ಸ್ಥಿತಿ ನಿರ್ವಹಣೆಯಲ್ಲಿ ವಿಫಲವಾಗಿರುವುದು ಮತ್ತು ರೂಪಾನಿಯ ಕಾರ್ಯವೈಖರಿ ಬಿಜೆಪಿ ವರಿಷ್ಠರ ಅಸಮಾಧಾನಕ್ಕೆ ಕಾರಣವಾಗಿದೆ ಎಂಬ ಗುಸುಗುಸು ಕೇಳಿಬಂದಿತ್ತು.
ಆದರೆ ರೂಪಾನಿ ಬದಲಾವಣೆ ಹಿಂದೆ ಮುಂದಿನ ಚುನಾವಣೆ ಎದುರಿಸುವ ಲೆಕ್ಕಾಚಾರವಿದೆ ಎಂಬುದು ರಹಸ್ಯವೇನಲ್ಲ. ಪಟೇಲ್ ಸಮುದಾಯ ಈಗಿನ ಆಡಳಿತದ ವಿರುದ್ಧ ತೀವ್ರ ಅಸಮಾಧಾನ ಹೊಂದಿತ್ತೆಂಬುದು ಬಿಜೆಪಿ ವರಿಷ್ಠರನ್ನು ಕಂಗೆಡಿಸಿತ್ತು. ಆ ಸಮುದಾಯವನ್ನು ಓಲೈಸುವ ತಂತ್ರದ ಭಾಗವಾಗಿ ರೂಪಾನಿಯನ್ನು ಬಲಿಪಶುವಾಗಿಸಿ, ಪಟೇಲ್ ಸಮುದಾಯದ ನಾಯಕನನ್ನು ಸಿಎಂ ಹುದ್ದೆಗೆ ತರಲಾಗಿದೆ ಎಂಬ ಮಾತುಗಳಿವೆ.
ಸೋಮವಾರ ಭೂಪೇಂದ್ರ ಪಟೇಲ್ ಒಬ್ಬರೇ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ.
