ದೆಹಲಿಯ ಮಹಿಳಾ ಪೊಲೀಸ್ ಅಧಿಕಾರಿಯ ಅತ್ಯಾಚಾರ ಮಾಡಿ ಹತ್ಯೆಗೈದ ಹಂತಕರನ್ನು ಗಲ್ಲಿಗೇರಿಸಲು ಆಗ್ರಹ; ಬಿಎಸ್ಪಿ ಪ್ರತಿಭಟನೆ
ಚಿಕ್ಕಮಗಳೂರು: ದೆಹಲಿಯ ಮಹಿಳಾ ಪೊಲೀಸ್ ಅಧಿಕಾರಿಯೋರ್ವರನ್ನು ಅಪಹರಿಸಿ, ಬಿಹಾರದಲ್ಲಿ ಆಕೆಯ ಮೇಲೆ ಭೀಕರವಾಗಿ ಅತ್ಯಾಚಾರ ಎಸಗಿದ ಪ್ರಕರಣದ ಹಂತಕರನ್ನು ಕೂಡಲೇ ಗಲ್ಲಿಗೇರಿಸಬೇಕೆಂದು ಆಗ್ರಹಿಸಿ ಬಹುಜನ ಸಮಾಜ ಪಾರ್ಟಿ ನೇತೃತ್ವದಲ್ಲಿ ಮೂಡಿಗೆರೆ ತಾಲೂಕು ಕಚೇರಿ ಆವರಣದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು.
ಈ ವೇಳೆ ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜಾಕೀರ್ ಹುಸೇನ್ ಮಾತನಾಡಿ, ದೆಹಲಿಯ ಮುಸ್ಲಿಂ ಮಹಿಳಾ ಪೊಲೀಸ್ ಅಧಿಕಾರಿಯನ್ನು ಬಿಹಾರದಲ್ಲಿ ಭೀಕರವಾಗಿ, ಆಕೆಯ ಸ್ತನ ಮತ್ತು ಗುಪ್ತಾಂಗವನ್ನು ಮಾರಕಾಸ್ತ್ರಗಳಿಂದ ಕತ್ತರಿಸಿ, ಹತ್ಯೆ ನಡೆಸಿದ್ದಾರೆ. ಅತ್ಯಾಚಾರ-ಹತ್ಯೆ ಪ್ರಕರಣಗಳು ದೇಶದಲ್ಲಿ ಹೆಚ್ಚಾಗಿದೆ. ಬಿಜೆಪಿ ಅಧಿಕಾರ ಹಿಡಿದ ನಂತರ ಇಂತಹ ಹೇಯ ಕೃತ್ಯಗಳು ಮಿತಿಮೀರಿದೆ. ಎಲ್ಲೆಲ್ಲೂ ಕೊಲೆ, ಸುಲಿಗೆ ನಡೆದರೂ, ಕೇಳುವವರೇ ಇಲ್ಲದಂತಾಗಿದೆ. ರಾಷ್ಟ್ರದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಅತ್ಯಾಚಾರಿ ಹಂತಕರನ್ನು ಕೂಡಲೇ ಬಂಧಿಸಿ, ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿದರು.
ಬಿಎಸ್ಪಿ ಮುಖಂಡ ಲೋಕವಳ್ಳಿ ರಮೇಶ್ ಮಾತನಾಡಿ, ಮಹಿಳೆಯರ ಮೇಲೆ ಅತ್ಯಾಚಾರ, ಕೊಲೆ ನಡೆಯುತ್ತಿದ್ದರೂ ಪ್ರಭುತ್ವ ಮೌನ ವಹಿಸಿದೆ. ದೇಶದ ಮೂಲನಿವಾಸಿಗಳಾದ ದಲಿತರು, ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ವಿರುದ್ಧ ಷಡ್ಯಂತ್ರದ ರಾಜಕೀಯ ನಡೆಯುತ್ತಿದೆ. ಕೋಮು ಪ್ರಚೋದಕ ಭಾಷಣ ಮಾಡುವ ವ್ಯಕ್ತಿಗಳನ್ನು ರಾಷ್ಟ್ರೀಯ ಭದ್ರತಾ ಕಾಯ್ದೆ ಬಳಸಿ ಬಂಧಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜೆಡಿಎಸ್ ಮುಖಂಡ ಶಬ್ಬೀರ್ ಅಹ್ಮದ್ ಬೇಗ್, ಎಸ್ಡಿಪಿಐ ಕ್ಷೇತ್ರ ಸಮಿತಿ ಅಧ್ಯಕ್ಷ ಮಹಮ್ಮದ್ ರಫೀಕ್, ಕಾರ್ಯದರ್ಶಿ ಎಂ ಯು ಷರೀಫ್, ಮಲೆನಾಡು ಮುಸ್ಲಿಂ ವೇದಿಕೆ ಅಧ್ಯಕ್ಷ ಅಬ್ರಾರ್ ಬಿದರಹಳ್ಳಿ, ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಜಾಕಿರ್ ಅಲಿಖಾನ್, ಚಿನ್ನಿಗ ಗ್ರಾಪಂ ಸದಸ್ಯ ಮಲ್ಲೇಶ್, ಬೆಟ್ಟಗೆರೆ ಗ್ರಾಪಂ ಸದಸ್ಯ ಕೋಳೂರು ಕುಮಾರ, ಬಿಎಸ್ಪಿ ಮುಖಂಡರಾದ ಯು ಬಿ ಮಂಜಯ್ಯ, ಪಿ ಕೆ ಮಂಜುನಾಥ್, ಬಕ್ಕಿ ಮಂಜು, ಶ್ರೀಕಾಂತ್, ಹಮೀದ್ ಬಿಳಗುಳ, ಯು ಬಿ ನಾಗೇಶ್, ರವೂಫ್ ಖಾನ್, ಹೊನ್ನೇಶ್ ಬೆಟ್ಟಗೆರೆ, ಹಾಂದಿ ಬಾಬಣ್ಣ, ದೊಡ್ಡಯ್ಯ ಮತ್ತಿತರರು ಇದ್ದರು.
