ಬಾಗಲಕೋಟೆ

ದೇವರ ಗದ್ದುಗೆ ಮೇಲಿನ ತೆಂಗಿನಕಾಯಿ ಆರೂವರೆ ಲಕ್ಷಕ್ಕೆ ಕೊಂಡ ಭಕ್ತ

ಬಾಗಲಕೋಟೆ : ಮಾಳಿಂಗರಾಯನ ಗದ್ದುಗೆ ಮೇಲಿನ ತೆಂಗಿನಕಾಯಿ 6,50,000 ರೂ. ಗೆ ಸವಾಲ್ ಆದ (ಹರಾಜು) ಹುಬ್ಬೇರಿಸುವಂತಹ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಚಿಕ್ಕಲಕಿ ಗ್ರಾಮದಲ್ಲಿ ನಡೆದಿದೆ.

ಜಿಲ್ಲೆಯ ಜಮಖಂಡಿ ತಾಲೂಕಿನ ಸುಕ್ಷೇತ್ರ ಚಿಕ್ಕಲಕಿ ಗ್ರಾಮದ ಮಾಳಿಂಗರಾಯ ದೇವರ ಜಾತ್ರೆ ಪ್ರತೀ ವರ್ಷ ಶ್ರಾವಣಮಾಸದ ಅಂತ್ಯದಲ್ಲಿ ನಡೆಯುತ್ತೆ. ಅದೇ ರೀತಿ ಈ ಬಾರಿಯೂ ಸಾವಿರಾರು ಭಕ್ತರ ಮಧ್ಯೆ ವಿಜೃಂಭಣೆಯಿಂದ ಜಾತ್ರೆ ನಡೆಯಿತು. ಜಾತ್ರೆಯಲ್ಲಿ ದೇವರ ಗದ್ದುಗೆ ಮೇಲಿನ ತೆಂಗಿನಕಾಯಿ ಸವಾಲ್ ನಡೆಯುತ್ತೆ. ಅದೇ ರೀತಿ ನಿನ್ನೆ ಜಾತ್ರೆಯ ಅಂತಿಮ ದಿನ ದೇವರ ತೆಂಗಿನಕಾಯಿಗಾಗಿ ಸವಾಲ್ ಏರ್ಪಡಿಸಲಾಗಿತ್ತು. ಸವಾಲ್ ನಲ್ಲಿ ಭಾಗವಹಿಸಿದ್ದ ಸಾವಿರಾರು ಭಕ್ತರು, ಶಕ್ತಿಗನುಸಾರವಾಗಿ ಸವಾಲ್ ಮಾಡಿದ್ರು. ಆದ್ರೆ,ವಿಜಯಪುರ ಜಿಲ್ಲೆಯ ಮಹಾವೀರ ಹರಕೆ ಎನ್ನುವ ಭಕ್ತ ದೇವರ ಗದ್ದುಗೆ ತೆಂಗಿನಕಾಯಿಗೆ 6,50,000 ರೂ ಸವಾಲು ಕೂಗಿ ತೆಂಗಿನಕಾಯಿ ಪಡೆದು ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾನೆ.‌

ಮಹಾವೀರ ವಿಜಯಪುರ ಜಿಲ್ಲೆ ತಿಕೋಟಾ ಮೂಲದ ನಿವಾಸಿಯಾಗಿದ್ದು, ತಲೆ ತಲಾಂತರದಿಂದ ಮಾಹಾವೀರ ಅವರ ಕುಟುಂಬಸ್ಥರು ಮಾಳಿಂಗರಾಯ ದೇವರ ಭಕ್ತರು. ಜಾತ್ರೆಯ ನಂತರ ಗದ್ದುಗೆ ತೆಂಗಿನಕಾಯಿ, ಪಲ್ಲಕ್ಕಿ ತೆಂಗಿನಕಾಯಿ, ದೇಗುಲ ತೆಂಗಿನಕಾಯಿಗಳಿಗೆ ಸವಾಲ್ ನಡೆಯುತ್ತೆ. ಇದು ಮಾಳಿಂಗರಾಯ ಜಾತ್ರೆಯ ವಿಶೇಷವಾಗಿದೆ. ಆದ್ರೆ ಈ ಇತಿಹಾಸದಲ್ಲೇ ಮೊದಲ ಬಾರಿಗೆ ಮಾಳಿಂಗರಾಯ ದೇವರ ಗದ್ದುಗೆ ತಮ್ಮ ತೆಂಗಿನಕಾಯಿ ಇಷ್ಟೊಂದು ದೊಡ್ಡ ಮೊತ್ತಕ್ಕೆ ಸವಾಲ್ ಆಗಿದೆ. ಅಲ್ಲದೇ ಸವಾಲ್ ಮಾಡಿ ತೆಂಗಿನ ಕಾಯಿ ಪಡೆದ ಭಕ್ತ ಮಹಾವೀರಗೆ ಜಾತ್ರಾ ಆಡಳಿತ ಮಂಡಳಿಯವರು ಹಾರ ಹಾಕಿ ಸನ್ಮಾನ ಮಾಡಿದ್ದಾರೆ. ಇನ್ನು ದೇವರ ತೆಂಗಿನಕಾಯಿ ಪಡೆದವರಿಗೆ ವಿಘ್ನಗಳು ದೂರವಾಗ್ತವೆ. ಶುಭಸಂದೇಶ ಸಿಗುತ್ತೆ ಎಂಬ ನಂಬಿಕೆ ಭಕ್ತರಲ್ಲಿದೆ. ಹೀಗಾಗಿ ಮಾಳಿಂಗರಾಯ ದೇವರ ಜಾತ್ರೆ ಭಾರಿ ವಿಶೇಷತೆಯಿಂದ ಕೂಡಿರುತ್ತೆ.

Related Articles

Leave a Reply

Your email address will not be published. Required fields are marked *

Back to top button