ಜನಮನ ಸೆಳೆದ ಅಮೀನಗಡ ಕೊರೊನಾ ಕಾರ್ಟೂನ್ ಜಾಗೃತಿ

ಬಾಗಲಕೋಟೆ: ಕಳೆದ ಮಾರ್ಚ್ ನಲ್ಲಿ ದೇಶದ ಅತಿದೊಡ್ಡ ಮಾಸ್ಕ್ ತಯಾರಿಸಿ, ಜಾಗೃತಿ ಮೂಡಿಸಿ ರಾಜ್ಯ ಮತ್ತು ರಾಷ್ಟ್ರದ ಗಮನ ಸೆಳೆದಿದ್ದ ಬಾಗಲಕೋಟೆ ಜಿಲ್ಲೆಯ ಅಮೀನಗಡ ಪಟ್ಟಣ ಇದೀಗ ಅತಿ ದೊಡ್ಡ ಕೊರೊನಾ ಜಾಗೃತಿಯ ಕಾರ್ಟೂನ್ ಚಿತ್ರ ಬಿಡಿಸುವ ಮೂಲಕ ಮತ್ತೊಮ್ಮೆ ದೇಶ ಮತ್ತು ರಾಜ್ಯದ ಗಮನವನ್ನು ಸೆಳೆದಿದೆ.
ಬಾಗಲಕೋಟೆ ಅಮೀನಗಡದ ಸ್ನೇಹಿತರು ಸೇರಿ ಆರಂಭಿಸಿರುವ ನಿಯೋಜಿತ ರಾಜಗುರು ಪತ್ತಿನ ಸಹಕಾರ ಸಂಘದ ಸಹಯೋಗದಲ್ಲಿ ಕಲಾವಿದರಾದ ಬಾಗಲಕೋಟೆಯ ಅಸ್ಲಂ ಕಲಾದಗಿ, ಅಮೀನಗಡದ ರವಿ ಬಂಡಿ ಕೈಚಳಕದಲ್ಲಿ ಕೊರೊನಾ ಜಾಗೃತಿ ಕಾರ್ಟೂನ್ ಚಿತ್ರಗಳು ಅರಳಿವೆ.
ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಕಾರ್ಟೂನ್ ಚಿತ್ರ ಬಿಡಿಸುವ ಕಾರ್ಯ ಮಾಡಿದ್ದು ಎಲ್ಲರ ಸೆಳೆಯುತ್ತಿದೆ ಎನ್ನುತ್ತಾರೆ ಸಂಘದ ಮುಖ್ಯ ಪ್ರವರ್ತಕ ಸುರೇಶ್ ಕಾಯಿ.
ಇನ್ನು ಚೆನ್ನೈನ ಎಸ್. ವಿ. ಮತ್ತು ಬೆಂಗಳೂರಿನ ಇಬ್ಬನಿ ಫೌಂಡೇಶನ್ ಜೊತೆಗೂಡಿ ಅಮೀನಗಡದಲ್ಲಿ ಇನ್ನೂರಕ್ಕೂ ಹೆಚ್ಚು ಕೊರೊನಾ ಫ್ರಂಟ್ ಲೈನ್ ವಾರಿಯರ್ಸ್ ಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಿಸಿದರು.
ಇನ್ನು ಜನರ ಗಮನ ಸೆಳೆಯುವ ನಿಟ್ಟಿನಲ್ಲಿ 100ಕ್ಕೂ ಹೆಚ್ಚು ಅಡಿ ಉದ್ದನೆಯ ಕಾರ್ಟೂನ್ ಚಿತ್ರಗಳ ಮೂಲಕ ಜಾಗೃತಿಯ ಮೂಡಿಸಲಾಗುತ್ತಿದೆ ಎನ್ನುತ್ತಾರೆ ಸಂಸ್ಥೆಯ ನಿರ್ದೇಶಕ ಮಂಜುನಾಥ್ ಬಂಡಿ.
ಅಮೀನಗಡ ಸೇರಿದಂತೆ ಹುನಗುಂದ ಮತ್ತು ಇಲಕಲ್ಲ ತಾಲೂಕಿನ ತುಂಬಾ ಕೊರೋನಾ ಮುಂಚೂಣಿಯ ಕಾರ್ಯಕರ್ತರಿಗೆ 2000ಕ್ಕೂ ಹೆಚ್ಚು ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಣೆ ಮಾಡಲು ಸ್ಥಳೀಯ ಮತ್ತು ಚೆನ್ನೈನ ಸಂಸ್ಥೆ ಜೊತೆಗೂಡಿ ಈ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದು ಇಬ್ಬನಿ ಫೌಂಡೇಶನ್ ಬೆಂಗಳೂರುನ ಶಿವಕುಮಾರ್ ಹೇಳಿದರು.
ಕಾರ್ಟೂನ್ ಚಿತ್ರಗಳನ್ನು ನೋಡಲು ಪಟ್ಟಣದ ಮತ್ತು ಸುತ್ತಮುತ್ತಲಿನ ಗ್ರಾಮಗಳ ಜನರು ಆಗಮಿಸುತ್ತಿದ್ದಾರೆ.ಇನ್ನು ಹುನಗುಂದ ತಹಶೀಲ್ದಾರ್ ಶ್ವೇತಾ ಬಿಡೇಕರ್ ಕಾರ್ಟೂನ್ ಚಿತ್ರ ನೋಡಿ ಮೆಚ್ಚುಗೆ ವ್ಯಕ್ತಪಡಿಸಿ, ವಾಟ್ಸಾಪ್ ಸೇರಿದಂತೆ, ಮಾಧ್ಯಮ, ಸಾಮಾಜಿಕ ಜಾಲತಾಣಗಳ ಮೂಲಕ ಜಾಗೃತಿ ಮೂಡಿಸುವಂತೆ ಸಲಹೆ ನೀಡಿದರು.




