ಇತರ ಕ್ರೀಡೆಕ್ರೀಡೆ

ಸಚಿನ್, ಕೊಹ್ಲಿಯಂತೆ ಸ್ಫೂರ್ತಿಯಾದ ಕನ್ನಡಿಗ ಕಾರ್ತಿಕ್

ಸೋಮಶೇಖರ್ ಪಡುಕರೆ

1999ರ ಕ್ರಿಕೆಟ್ ವಿಶ್ವಕಪ್ ನಲ್ಲಿ ಸಚಿನ್ ತೆಂಡೂಲ್ಕರ್ ತಂದೆಯ ಸಾವಿನ ನೋವನ್ನು ಮರೆತು ಕೀನ್ಯಾ ವಿರುದ್ಧ ಅಜೇಯ 140 ರನ್ ಗಳಿಸಿ ಕ್ರೀಡಾ ಜಗತ್ತಿಗೆ ಸ್ಫೂರ್ತಿಯಾದದ್ದು, ಕರ್ನಾಟಕ ವಿರುದ್ಧದ ರಣಜಿ ಪಂದ್ಯದಲ್ಲಿ 18 ವರ್ಷದ ವಿರಾಟ್ ಕೊಹ್ಲಿ ತಂದೆ ಸಾವಿನ ನಡುವೆಯೂ ಮರುದಿನ ಇನ್ನಿಂಗ್ಸ್ ಮುಂದುವರಿಸಿ ದಿಲ್ಲಿ ತಂಡವನ್ನು ಫಾಲೋ ಆನ್ ನಿಂದ ರಕ್ಷಿಸಿದ್ದು ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೇ ಉಳಿದಿದೆ. ಇದೇ ರೀತಿಯ ಘಟನೆ ವಾಲಿಬಾಲ್ ನಲ್ಲಿ ನಡೆದರೆ?

ಸುದ್ದಿಯೇ ಆಗೊಲ್ಲ…ಏಕೆಂದರೆ ನಮಗೆ ಕ್ರಿಕೆಟ್ ಕೊಡುವಷ್ಟು ಪ್ರಚಾರ ವಾಲಿಬಾಲ್ ಕೊಡೊಲ್ಲ.

ಏಷ್ಯನ್ ವಾಲಿಬಾಲ್ ಚಾಂಪಿಯನ್ಷಿಪ್ ನಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿರವ ಕರ್ನಾಟಕದ ಆಟಗಾರ ಕಾರ್ತಿಕ್ ಅವರು ಸಚಿನ್ ಹಾಗೂ ಕೊಹ್ಲಿಯಂತೆ ದೇಶದ ಕ್ರೀಡಾಭಿಮಾನಿಗಳಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ.

ಮಾರ್ಚ್ ತಿಂಗಳಲ್ಲಿ ಭುವನೇಶ್ವರದಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್ಷಿಪ್ ನಲ್ಲಿ ಪಾಲ್ಗೊಳ್ಳಲು ಕರ್ನಾಟಕ ತಂಡ ಬೆಂಗಳೂರಿನಿಂದ ರೈಲಿನಲ್ಲಿ ಪ್ರಯಾಣ ಬೆಳೆಸಲು ಸಜ್ಜಾಗಿತ್ತು. ಕಾರ್ತಿಕ್ ಇನ್ನೇನು ತಂಡವನ್ನು ಸೇರಿಕೊಳ್ಳಲು ಮನೆಯಿಂದ ಹೊರಡುವವರಿದ್ದರು, ಆದರೆ ಕಾರ್ತಿಕ್ ಅವರ ತಂದೆ ಅಶೋಕ್ ಅನಾರೋಗ್ಯದ ಕಾರಣ ಸಾವನ್ನಪ್ಪಿದ ಆಘಾತಕಾರಿ ಸುದ್ದಿ ತಂಡವನ್ನು ತಲಪುತ್ತದೆ. ಕಾರ್ತಿಕ್ ಅವರ ವಾಲಿಬಾಲ್ ಯಶಸ್ಸಿನಲ್ಲಿ ಅಶೋಕ್ ಅವರ ಪಾತ್ರ ಪ್ರಮುಖವಾಗಿತ್ತು. ಈ ಕಾರಣಕ್ಕಾಗಿಯೇ ಕಾರ್ತಿಕ್ ತಂದೆಯ ಅಂತ್ಯ ಸಂಸ್ಕಾರವನ್ನು ಮುಗಿಸಿ ನೇರವಾಗಿ ಭುವನೇಶ್ವರಕ್ಕೆ ಪ್ರಯಾಣಿಸಿ ಕರ್ನಾಟಕ ತಂಡದಲ್ಲಿ ಉತ್ತಮ ಪ್ರದರ್ಶನ ತೋರಿದ್ದು ಮಾತ್ರವಲ್ಲದೆ, ಭಾರತ ತಂಡಕ್ಕೆ ಆಯ್ಕೆಯಾದರು. ಅದೂ ನಾಯಕನಾಗಿ. ಈ ಚಾಂಪಿಯನ್ಷಿಪ್ ನಲ್ಲಿ ಕರ್ನಾಟಕ ತಂಡದ ನಾಯಕತ್ವವನ್ನು ಕುಂದಾಪುರದ ರೈಸನ್ ವಹಿಸಿದ್ದರು.

ಇದೇ ತಿಂಗಳ 12ರಿಂದ ಆರಂಭಗೊಳ್ಳಲಿರುವ ಏಷ್ಯನ್ ಚಾಂಪಿಯನ್ಷಿಪ್ ನಲ್ಲಿ ಸ್ಪರ್ಧಿಸಲಿರುವ ಭಾರತ ತಂಡದ ನಾಯಕತ್ವನ್ನು ವಹಿಸಿರುವ ಕಾರ್ತಿಕ್ ತಾವು ಸಾಗಿ ಬಂದ ಹಾದಿ, ನಾಯಕನ ಜವಬ್ದಾರಿ ಹಾಗೂ ತಂದೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ತಂದೆಯ ಪ್ರೋತ್ಸಾಹ:

ಹಲವಾರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಕಾರ್ತಿಕ್ ಅವರು ಹೆತ್ತವರ ಮತ್ತು ಗುರುವಿನ ಮಾತು ಮೀರದ ಶಿಸ್ತಿನ ಆಟಗಾರ. ಬೆಂಗಳೂರಿನಲ್ಲಿ ಪೋಸ್ಟಲ್ ತಂಡದ ಪರ ಆಡುತ್ತಿರುವ “ನಾನು ಕಳೆದ 20 ವರ್ಷಗಳಿಂದ ವಾಲಿಬಾಲ್ ನಲ್ಲಿ ತೊಡಗಿಸಿಕೊಂಡಿದ್ದೇನೆ. ನನಗೆ ತಂದೆಯೇ ಪ್ರೋತ್ಸಾಹ. ಗೆಲುವಿರಲಿ, ಸೋಲಿರಲಿ ಅವರು ಯಾವತತ್ತೂ ನನ್ನ ಆಟದ ಬಗ್ಗೆ ಖುಷಿಯಾಗಿರುತ್ತಾರೆ. ಮೊನ್ನೆ ಮಾರ್ಚ್ ನಲ್ಲಿ ನಮ್ಮ ಕರ್ನಾಟಕ ತಂಡ ಭುವನೇಶ್ವರದಲ್ಲಿ ನಡೆದ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್ಷಿಪ್ ನಲ್ಲಿ ಪಾಲ್ಗೊಳ್ಳಲು ಹೊರಟಿತ್ತು. ಅದೇ ಸಂದರ್ಭದಲ್ಲಿ ತಂದೆ ಸಾವಿನ ಸುದ್ದಿ ನಮ್ಮ ಮನೆಯನ್ನು ತುಂಬಿತ್ತು. ತಂಡ ಹೊರಟಿತು. ನಾನು ತಂದೆಯ ಕಾರ್ಯವನ್ನು ಮುಗಿಸಿ ಮರುದಿನ ಪ್ರಯಾಣಿಸಿದೆ. ಇಲ್ಲಿಯೂ ಅವರ ಸ್ಫೂರ್ತಿಯಿಂದಲೇ ಆಡುವೆ. ಅವರು ನಮ್ಮನ್ನಗಲಿ ಮೂರು ತಿಂಗಳಾಯಿತು. ಇರುತ್ತಿದ್ದರೆ ನನ್ನ ಬಗ್ಗೆ ಬಹಳ ಹೆಮ್ಮೆಪಟ್ಟುಕೊಳ್ಳುವರು, ಅವರು ದೈಹಿಕವಾಗಿ ಇಲ್ಲದಿದ್ದರೂ, ನನ್ನ ಹೃದಯದಲ್ಲಿ ಸದಾ ಇರುತ್ತಾರೆ, ಅವರಿಗೋಸ್ಕರ ನಾನು ಉತ್ತಮವಾಗಿಯೇ ಆಡುವೆ,” ಎಂದರು.

ನಾಯಕತ್ವದ ಜವಾಬ್ದಾರಿ:

ಕಾರ್ತಿಕ್​​​​​​​​​​​ ಮೊದಲ ಬಾರಿಗೆ ಭಾರತ ತಂಡದ ನಾಯಕ್ವವನ್ನು ನಿಭಾಯಿಸುತ್ತಿದ್ದಾರೆ, ಅದು ಕೂಡ ಏಷ್ಯಾ ಮಟ್ಟದಲ್ಲಿ. “ಹಲವಾರು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಅನುಭವ ಇದೆ. ಆದರೆ ರಾಷ್ಟ್ರೀಯ ತಂಡದ ನಾಯಕನಾಗಿರುವುದರಿಂದ ಜವಾಬ್ದಾರಿ ಹೆಚ್ಚಿದೆ. ಕರ್ನಾಟಕ ತಂಡದ ನಾಯಕನಾಗಿದ್ದಾಗ ಎಲ್ಲ ಆಟಗಾರರು ನಮ್ಮವರೇ ಆಗಿದ್ದ ಕಾರಣ ಅಲ್ಲೊಂದು ರೀತಿಯ ಆತ್ಮವಿಶ್ವಾಸ. ಇಲ್ಲಿ ಬೇರೆ ಬೇರೆ ರಾಜ್ಯಗಳಿಂದ ಬಂದ ಆಟಗಾರರಿರುತ್ತಾರೆ, ಆದ್ದರಿಂದ ಹೊಂದಾಣಿಕೆ ಮಾಡಿಕೊಂಡು ಆಡಬೇಕು, ಉತ್ತಮ ರೀತಿಯಲ್ಲಿ ಅಭ್ಯಾಸ ನಡೆಸುತ್ತಿದ್ದೇವೆ,” ಎಂದರು.

Spread the love

Related Articles

Leave a Reply

Your email address will not be published. Required fields are marked *

Back to top button