ಡ್ರಗ್ಸ್ ಪ್ರಕರಣದ ಚಾರ್ಜ್ಶೀಟ್ನಲ್ಲಿ ಆ್ಯಂಕರ್ ಅನುಶ್ರೀ ಹೆಸರು; ಕಂಟಕ ತಂದಿಟ್ಟ ಆರೋಪಿ ಕಿಶೋರ್ ಶೆಟ್ಟಿ ಹೇಳಿಕೆ

ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿ ಚಾರ್ಜ್ಶೀಟ್ ಸಲ್ಲಿಸಿದ್ದು, ಟಿವಿ ಆ್ಯಂಕರ್ ಅನುಶ್ರೀ ಹೆಸರು ಉಲ್ಲೇಖವಾಗಿರುವ ವಿಚಾರ ಬಹಿರಂಗವಾಗಿದೆ.
ಆರೋಪಿ ಕಿಶೋರ್ ಅಮನ್ ಶೆಟ್ಟಿ ಕೊಟ್ಟ ಹೇಳಿಕೆ ನಿರೂಪಕಿ ಅನುಶ್ರೀಗೆ ಕಂಟಕ ತಂದಿಟ್ಟಿದೆ. ಅನುಶ್ರೀ ತಾವೂ ಡ್ರಗ್ಸ್ ಸೇವಿಸಿ ತಮಗೂ ಕೊಡುತ್ತಿದ್ದರು. ಇದನ್ನು ತೆಗೆದುಕೊಂಡರೆ ದಣಿವಿಲ್ಲದೆ ಡಾನ್ಸ್ ಮಾಡಬಹುದು ಎಂದು ಅವರು ಹೆಳುತ್ತಿದ್ದರು. ಆಕೆಗೆ ಪೆಡ್ಲರ್ಗಳ ಪರಿಚಯವಿತ್ತು. ಸುಲಭವಾಗಿ ಅವರಿಗೆ ಡ್ರಗ್ಸ್ ಸಿಗುತ್ತಿತ್ತು ಎಂಬಿತ್ಯಾದಿ ಆರೋಪಗಳನ್ನು ಕಿಶೋರ್ ಶೆಟ್ಟಿ ಮಾಡಿರುವುದಾಗಿ ಗೊತ್ತಾಗಿದೆ.
ಡ್ರಗ್ಸ್ ಸೇವನೆ ಮಾತ್ರವಲ್ಲ, ಅದರ ಸಾಗಾಟವನ್ನೂ ಅನುಶ್ರೀ ಮಾಡುತ್ತಿದ್ದರು ಎಂಬ ಆರೋಪವನ್ನೂ ಕಿಶೋರ್ ಶೆಟ್ಟಿ ಮಾಡಿದ್ದು, ರೂಮ್ನಲ್ಲಿ ಕೊರಿಯೊಗ್ರಾಫರ್ ತರುಣ್ ಮತ್ತು ತನ್ನೊಂದಿಗೆ ಸಾಕಷ್ಟು ಬಾರಿ ಅನುಶ್ರೀ ಡ್ರಗ್ಸ್ ಸೇವನೆ ಮಾಡಿದ್ದರು ಎಂಬ ಆತನ ಹೇಳಿಕೆಯೂ ಚಾರ್ಜ್ಶೀಟ್ನಲ್ಲಿ ಉಲ್ಲೇಖಗೊಂಡಿರುವುದಾಗಿ ತಿಳಿದುಬಂದಿದೆ.
ಇದನ್ನೂ ಓದಿ: ಡ್ರಗ್ಸ್ ಕೇಸ್‍ನಲ್ಲಿ ಯಾರ ಒತ್ತಡಕ್ಕೂ ಪೊಲೀಸರು ಮಣಿಯುವುದಿಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ
ಕಿಶೋರ್ ಶೆಟ್ಟಿ ನೀಡಿರುವ ಹೇಳಿಕೆ, 2007-08ರ ಸಂದರ್ಭದ ರಿಯಾಲಿಟಿ ಶೋ ವೇಳೆಯಲ್ಲಿ ಅನುಶ್ರೀ ಜೊತೆಗಿನ ಆತನ ಮತ್ತು ತರುಣ್ ಒಡನಾಟದ ವಿಚಾರವನ್ನು ಬಯಲು ಮಾಡಿದ್ದು, ಈಗಾಗಲೇ ಒಮ್ಮೆ ವಿಚಾರಣೆ ಎದುರಿಸಿರುವ ಅನುಶ್ರೀಯನ್ನು ಈ ಪ್ರಕರಣ ಗಂಭೀರವಾಗಿ ಸುತ್ತಿಕೊಳ್ಳುವ ಸೂಚನೆಗಳು ಕಾಣಿಸಿವೆ.
ಚಾರ್ಜ್ಶೀಟ್ನಲ್ಲಿ ತಮ್ಮ ಹೆಸರು ಉಲ್ಲೇಖವಾಗಿರುವುದು ಗೊತ್ತಾಗುತ್ತಿದ್ದಂತೆ ಅನುಶ್ರೀ ಮುಂಬೈಗೆ ತೆರಳಿದ್ದಾರೆ ಎಂದೂ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ.
ಸಿಸಬಿ ವಿಚಾರಣೆಯನ್ನು ಮಂಗಳೂರಿನಲ್ಲಿ ಎದುರಿಸಿದ್ದ ಅನುಶ್ರೀ, ಆ ಬಳಿಕ ನಿರಾಳವಾಗಿದ್ದರು. ಅವರು ಡ್ರಗ್ಸ್ ಸೇವಿಸಿದ್ದಾರೆಯೇ ಎಂಬುದರ ಬಗ್ಗೆ ಯಾವುದೇ ಪರೀಕ್ಷೆ ನಡೆದಿರಲಿಲ್ಲ. ಅವರ ವಿರುದ್ಧ ವಿಚಾರಣೆ ನಡೆಸದಂತೆ ಮಾಜಿ ಸಿಎಂ ಮತ್ತು ದಕ್ಷಿಣ ಕನ್ನಡದ ಪ್ರಭಾವಿ ರಾಜಕಾರಣಿಯೊಬ್ಬರ ಒತ್ತಡವಿತ್ತು ಎಂಬ ಊಹಾಪೋಹಗಳೂ ಈ ಹಿಂದೆ ಹರಿದಾಡಿದ್ದವು. ಈಗ ಚಾರ್ಜ್ಶೀಟ್ನಲ್ಲಿ ಹೆಸರು ಉಲ್ಲೇಖಗೊಂಡಿರುವ ಹಿನ್ನೆಲೆಯಲ್ಲಿ ಮತ್ತೆ ಅನುಶ್ರೀ ವಿಚಾರ ಮುನ್ನೆಲೆಗೆ ಬಂದಿದೆ.
