ಜೆಡಿಎಸ್ ಬೆಂಬಲ ಪಡೆದು ಕಲಬುರಗಿ ಪಾಲಿಕೆಯಲ್ಲಿ ಅಧಿಕಾರ: ಶರಣಪ್ರಕಾಶ್ ಪಾಟೀಲ್

ಕಲಬುರಗಿ: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಜೆಡಿಎಸ್ ಪಕ್ಷದೊಂದಿಗೆ ಸೇರಿ ಪಾಲಿಕೆಯ ಅಧಿಕಾರ ಹಿಡಿಯುತ್ತೇವೆ ಎಂದು ಮಾಜಿ ಸಚಿವ, ಕಾಂಗ್ರೆಸ್ ವಕ್ತಾರ ಶರಣಪ್ರಕಾಶ್ ಪಾಟೀಲ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಕಾಂಗ್ರೆಸ್ ತಲಾ 10 ವಾರ್ಡ್ ಗೆದ್ದಿದೆ, ಆದರೆ ನಾವು ಉತ್ತರ ಕ್ಷೇತ್ರದಲ್ಲಿ 17 ಸ್ಥಾನಗಳನ್ನ ಗೆದ್ದಿದ್ದೇವೆ. ಕಳೆದ ಬಾರಿಗಿಂತಲು ಈ ಬಾರಿ ನಾಲ್ಕು ಸ್ಥಾನವನ್ನು ನಾವು ಹೆಚ್ಚಿಗೆ ಗೆದ್ದಿದ್ದೆವೆ. ಇನ್ನೂ ಎರಡ್ಮೂರು ಸ್ಥಾನದಲ್ಲಿ ಗೆಲ್ಲುತ್ತೇವೆ ಎಂಬ ನಿರೀಕ್ಷೆ ಇತ್ತು ಆದ್ರೆ ಆಗಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷಕ್ಕೆ ಜೆಡಿಎಸ್ ಬೆಂಬಲ ನೀಡುತ್ತದೆ ಎಂಬ ವಿಶ್ವಾಸ ಇದೆ. ನಾವು ಕೂಡ ಸ್ಥಳೀಯ ಜೆಡಿಎಸ್ ನಾಯಕರ ಜೊತೆ ಮಾತುಕತೆ ನಡೆಸಿದ್ದೇವೆ. ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಒಲವು ವ್ಯಕ್ತಪಡಿಸಿದ್ದಾರೆ. ಬಿಜೆಪಿ ಏನೇ ಕುತಂತ್ರ ಮಾಡಿದ್ರು ಮೇಯರ್ ಸ್ಥಾನ ಸಿಗುವದಿಲ್ಲ. ನಮ್ಮ ನಾಯಕರು ಜೆಡಿಎಸ್ ರಾಜ್ಯ ಮಟ್ಟದ ನಾಯಕರ ಜೊತೆ ಸಹ ಮಾತುಕತೆ ನಡೆಸುತ್ತಿದ್ದಾರೆ. ಅಲ್ಲದೆ ಜೆಡಿಎಸ್ ಜಾತ್ಯಾತೀತ ಪಕ್ಷ, ಜಾತ್ಯಾತೀತ ಮುರಿದು ಬಿಜೆಪಿಯೊಂದಿಗೆ ಹೋಗುವದಿಲ್ಲ ಎಂದು ಡಾ ಶರಣಪ್ರಕಾಶ್ ಪಾಟೀಲ್ ಹೇಳಿದ್ದಾರೆ.
