Breaking Newsಜಿಲ್ಲಾ ಸುದ್ದಿದಾವಣಗೆರೆ

ಹೊನ್ನಾಳಿಯಲ್ಲಿ ಜೋರಾಗುತ್ತಿದೆ “ಫುಡ್ ಕಿಟ್ ಪೊಲಿಟಿಕ್ಸ್”: ಹಾಲಿ- ಮಾಜಿ ಶಾಸಕರ ನಡುವೆ ಬಿಗ್ ಫೈಟ್..!

ದಾವಣಗೆರೆ: ಹೊನ್ನಾಳಿಯಲ್ಲಿ ಫುಡ್ ಕಿಟ್ ರಾಜಕೀಯ ದಿನ ಕಳೆದಂತೆ ಜೋರಾಗುತ್ತಿದೆ. ಶಾಸಕ ಎಂ. ಪಿ. ರೇಣುಕಾಚಾರ್ಯ ಹಾಗೂ ಕಾಂಗ್ರೆಸ್ ನ ಮಾಜಿ ಶಾಸಕ ಶಾಂತನಗೌಡರು ಪರಸ್ಪರ ಆರೋಪ -ಪ್ರತ್ಯಾರೋಪ ಮಾಡಲು ಶುರು ಮಾಡಿದ್ದಾರೆ. ಚುನಾವಣೆ ದೂರ ಇದ್ದರೂ ಈ ಇಬ್ಬರು ನಾಯಕರ ವಾಕ್ಸಮರ ತಾರಕಕ್ಕೇರುತ್ತಿದೆ.

ಗೋದಾಮುಗಳಲ್ಲಿ ಫುಡ್ ಕಿಟ್ ಗಳನ್ನು ಇಟ್ಟು ಹಾಳು ಮಾಡಲಾಗಿದೆ. ಇದಕ್ಕೆ ರೇಣುಕಾಚಾರ್ಯ ಕಾರಣ ಎಂದು ಡಿ. ಬಿ. ಶಾಂತನಗೌಡ ಆರೋಪಿಸಿದ್ದರು. ಮಾತ್ರವಲ್ಲ, ಎಲ್ಲದಕ್ಕೂ ಪ್ರಚಾರ ಪಡೆಯುವ ರೇಣುಕಾಚಾರ್ಯ ಅಧಿಕಾರಿಗಳ ಮೇಲೆ ಒತ್ತಡ ಹಾಕಿದ್ದರಿಂದಲೇ ಕಟ್ಟಡ ಕಾರ್ಮಿಕರಿಗೆ ಫುಡ್ ಕಿಟ್ಟ ಕೊಟ್ಟಿರಲಿಲ್ಲ. ಇದಕ್ಕೆ ನೇರ ಹೊಣೆ ಶಾಸಕರೇ ಎಂದು ಆರೋಪಿಸಿದ್ದರು.

ಮಾತ್ರವಲ್ಲ, ಕಟ್ಟಡ ಕಾರ್ಮಿಕರಿಗೆ ಫುಡ್ ಕಿಟ್ ವಿತರಣೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಗಂಭೀರ ಆರೋಪ ಮಾಡಿದ್ದರು. ಮಾತ್ರವಲ್ಲ, ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯ ಮಾಡದೇ ಕೇವಲ ಪ್ರಚಾರಕ್ಕಾಗಿ ಓಡಾಡಿಕೊಂಡು ಇದ್ದಾರೆ. ಜನರ ಕಾಳಜಿಗಿಂತ ಹಣ ಮಾಡುವುದೇ ಶಾಸಕರ ಕೆಲಸ ಎಂದು ದೂರಿದ್ದರು.

ಡಿ. ಬಿ. ಶಾಂತನಗೌಡರು ಈಗ ಕ್ಷೇತ್ರದಾದ್ಯಂತ ಓಡಾಟ ಶುರು ಮಾಡಿದ್ದಾರೆ. ಜನರ ಬಳಿಗೆ ಹೋಗುತ್ತಿದ್ದಾರೆ. ಏನೇ ಕಷ್ಟ ಅಂದರೆ ಸಾಕು ಥಟ್ಟನೆ ಹೋಗುತ್ತಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಆರಂಭಿಸಿದ್ದಾರೆ. ಇನ್ನು ರೇಣುಕಾಚಾರ್ಯ ಕೂಡ ಹಿಂದೆ ಬಿದ್ದಿಲ್ಲ. ಕ್ಷೇತ್ರಕ್ಕೆ ಬಂದರೆ ಸಾಕು ಕಾರ್ಯಕ್ರಮಗಳಲ್ಲಿಯೇ ಬ್ಯುಸಿ ಆಗಿರುತ್ತಾರೆ. ಆದ್ರೆ, ಈ ಇಬ್ಬರು ನಾಯಕರ ಕಚ್ಚಾಟ ಜೋರಾಗಿದೆ. ಕಳೆದ ಹದಿನೈದು ದಿನಗಳ ಹಿಂದೆ ಶುರುವಾಗಿರುವ ಫುಡ್ ಕಿಟ್ ರಾಜಕೀಯದ ಕೆಸರೆರಚಾಟ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಗೋಚರಿಸುತ್ತಿಲ್ಲ. ಇದರ ಮುಂದುವರಿದ ಭಾಗವಾಗಿ ಶಾಸಕ ರೇಣುಕಾಚಾರ್ಯ ಅವರು, ಶಾಂತನಗೌಡರಿಗೆ ಸವಾಲು ಹಾಕಿದ್ದಾರೆ.

ಇನ್ನು ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಹೊನ್ನಾಳಿ ಬಿಜೆಪಿಯ ಶಾಸಕ ಎಂ. ಪಿ. ರೇಣುಕಾಚಾರ್ಯ, ನಾನು ಅವ್ಯವಹಾರ ನಡೆಸಿದ್ದನ್ನು ಸಾಬೀತುಪಡಿಸಿದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ತಿರುಗೇಟು ನೀಡಿದ್ದಾರೆ. ಕಾರ್ಮಿಕ ಇಲಾಖೆಗೆ ಬಂದ ಫುಡ್ ಕಿಟ್ ಗಳನ್ನು ಬಿಜೆಪಿ ಕಾರ್ಯಕರ್ತರು, ಮುಖಂಡರ ಮನೆಯಲ್ಲಿಟ್ಟಿದ್ದೇನೆ ಎಂಬ ಆರೋಪ ಮಾಡಿರುವುದು ಶುದ್ಧ ಸುಳ್ಳು. ನನ್ನ ಮೇಲೆ ಸುಖಾಸುಮ್ಮನೆ ಆರೋಪ ಮಾಡಿದರೆ ಹೇಗೆ. ಸಾಕ್ಷ್ಯ್ ತೋರಿಸಿ ಆರೋಪ ಮಾಡಲಿ ಎಂದು ಪ್ರತಿಸವಾಲು ಹಾಕಿದ್ದಾರೆ.

ನಾನು ಶಾಸಕನಾದ ಬಳಿಕ ಪಕ್ಷ ಭೇದ ಮಾಡಿಲ್ಲ, ಎಲ್ಲರನ್ನೂ ಸಮಾನಾಗಿ ಕಾಣುವ ಪ್ರವೃತ್ತಿ ನನ್ನದು. ನನ್ನ ಏಳಿಗೆ ಸಹಿಸದೇ ಈ ರೀತಿಯ ಆರೋಪ ಮಾಡಲಾಗುತ್ತಿದೆ. ನಾನೆಲ್ಲಿಯೂ ಬಿಜೆಪಿಯವರಿಗೆ ಮಾತ್ರ ಕೊಡಿ, ಕಾಂಗ್ರೆಸ್ ನವರಿಗೆ ಕೊಡಬೇಡಿ ಎಂದು ಹೇಳಿಲ್ಲ. ಮಾಜಿ ಶಾಸಕರು ಸುಖಾಸುಮ್ಮನೆ ಆರೋಪ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ. ಈ ಇಬ್ಬರು ನಾಯಕರ ವಾಕ್ಸಮರ ಎಲ್ಲಿಗೆ ಮುಟ್ಟುತ್ತೆ ಎಂಬುದನ್ನು ಕಾದು ನೋಡಬೇಕಿದೆ.

Spread the love

Related Articles

Leave a Reply

Your email address will not be published. Required fields are marked *

Back to top button