ಪಾಲಿಕೆ ಚುನಾವಣೆಗೆ ಉತ್ಸಾಹ ತೋರದ ಮತದಾರ; ಏನಾಗಲಿದೆ ಲೆಕ್ಕಾಚಾರ?

ಬೆಳಗಾವಿ: ಬೆಳಗಾವಿ ಮಹಾನಗರದಾದ್ಯಂತ ಪಾಲಿಕೆ ಚುನಾವಣೆಗೆ ನೀರಸ ಮತದಾನ ನಡೆದಿದೆ. ಒಟ್ಟು 4 ಲಕ್ಷ 30 ಸಾವಿರ 825 ಮತದಾರರ ಪೈಕಿ, 2ಲಕ್ಷ 14 ಸಾವಿರದ 848 ಜನ ಪುರುಷರು, ಹಾಗೂ 2ಲಕ್ಷ 15 ಸಾವಿರದ 977 ಸ್ತ್ರೀಯರು ಮತದಾರರು ಮತ ಚಲಾವಣೆ ಮಾಡಬೇಕಿತ್ತು.
ಆ ಪೈಕಿ 1ಲಕ್ಷ 13 ಸಾವಿರದ 738 ಪುರುಷರು ಹಾಗೂ 1 ಲಕ್ಷ 03 ಸಾವಿರದ 493 ಜನ ಮಹಿಳೆಯರು ಸೇರಿದಂತೆ ಒಟ್ಟು 2 ಲಕ್ಷದ 17 ಸಾವಿರದ 231 ಜನ ಮತ ಚಲಾವಣೆ ಮಾಡಿದ್ದಾರೆ. ಒಟ್ಟು ಮತದಾನ 50.42 ಶೇಕಡಾ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಏನಾಗಲಿದೆ ಪಾಲಿಕೆ ಚುನಾವಣೆ ಲೆಕ್ಕಾಚಾರ?
ಕೆಲವು ಪಕ್ಷಗಳ ರಿಪೋರ್ಟ್ ಹಾಗೂ ಕೆಲವು ರಾಜಕೀಯ ವಿಶ್ಲೇಷಕರ ಲೆಕ್ಕಾಚಾರದ ಪ್ರಕಾರ ಯಾವ ಪಕ್ಷಕ್ಕೂ ಬಹುಮತ ಬರುವುದಿಲ್ಲ. ಪಕ್ಷೇತರರೇ ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಲಿದ್ದಾರೆ. ಎಂಇಎಸ್ ಅಭ್ಯರ್ಥಿಗಳ ಸಂಖ್ಯೆ ಕೂಡ ಹೆಚ್ಚಿರುವುದಿಲ್ಲ.
ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದ್ದು, 20-22 ಸ್ಥಾನ ಗೆಲ್ಲಲಿದೆ. ಕಾಂಗ್ರೆಸ್ 10-12 ಸ್ಥಾನಗಳಲ್ಲಿ ವಿಜಯಿಯಾಗಲಿದೆ. 28-30 ಸ್ಥಾನಗಳಲ್ಲಿ ಪಕ್ಷೇತರರು ಗೆಲುವು ಸಾಧಿಸಲಿದ್ದಾರೆ. ಪಕ್ಷೇತರರೆಂದರೆ ಬಿಜೆಪಿ, ಕಾಂಗ್ರೆಸ್, ಎಂಇಎಸ್ ಬಂಡಾಯ ಎಲ್ಲವೂ ಸೇರಿದೆ.
ಇಂತಹ ಅತಂತ್ರ ಸ್ಥಿತಿಯಲ್ಲಿ ಮೇಯರ್ ಪಟ್ಟ ಯಾರಿಗೆ ಸಿಗಲಿದೆ? ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಿರುವುದರಿಂದ ಸಹಜವಾಗಿ ಪೈಪೋಟಿ ಉಂಟಾಗಲಿದೆ. ಯಾವುದೇ ಪಕ್ಷ ಸ್ವತಂತ್ರವಾಗಿ ಆಡಳಿತಕ್ಕೇರಲು ಸಾಧ್ಯವಿಲ್ಲ.
ಬಿಜೆಪಿ ಕನಿಷ್ಟ 8 -10 ಪಕ್ಷೇತರರನ್ನು ತನ್ನತ್ತ ಸೆಳೆಯಬೇಕಿದೆ. ಬಿಜೆಪಿ, ಕಾಂಗ್ರೆಸ್ ಮತ್ತು ಎಂಇಎಸ್ ಬಂಡಾಯಗಾರರಿಗೆ ಬಲೆ ಬೀಸಬೇಕಿದೆ. ಆಪರೇಷನ್ ಕಮಲ ನಡೆಸಬೇಕಾಗುತ್ತದೆ. ಇದು ಬಿಜೆಪಿಗೆ ಅಸಾಧ್ಯದ ಮಾತೇನಲ್ಲ.
ಕಾಂಗ್ರೆಸ್, ಎಂಇಎಸ್ ಸೇರಿದಂತೆ ಪಕ್ಷೇತರರ ಸಂಪೂರ್ಣ ಬೆಂಬಲ ಪಡೆದು ಆಡಳಿತ ನಡೆಸಲು ಮುಂದಾಗಬಹುದು. ಕನಿಷ್ಠ 20 ಪಕ್ಷೇತರರು ಕಾಂಗ್ರೆಸ್ ಗೆ ಬೆಂಬಲ ನೀಡಲು ಮುಂದಾಗಬೇಕಾಗುತ್ತದೆ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ – ಶಿವಸೇನೆ ಒಂದಾದಂತೆ ಅದೇ ಸೂತ್ರವನ್ನು ಬಳಸಿ ಎಂಇಎಸ್ ಜೊತೆ (ಪಕ್ಷೇತರರು ಎನ್ನುವ ಹೆಸರಿನಲ್ಲಿ) ಹೊಂದಾಣಿಕೆ ಮಾಡಿಕೊಳ್ಳಬಹುದು. ಆದರೆ ರಾಜ್ಯದ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಬೇಕಾದೀತು.
ಇನ್ನು ಎಂಇಎಸ್ ದೂರವಿಡಬೇಕೆನ್ನುವ ಕಾರಣಕ್ಕಾಗಿ ಕನ್ನಡ ಸಂಘಟನೆಗಳ ಮಧ್ಯಸ್ಥಿಕೆಯಲ್ಲಿ, ಕಾಂಗ್ರೆಸ್ -ಬಿಜೆಪಿ ಒಂದಾಗಿ ಅಧಿಕಾರದ ಗದ್ದುಗೆ ಏರಿದರೂ ಆಶ್ಚರ್ಯವಿಲ್ಲ. ಎಂಇಎಸ್ ಸ್ವತಂತ್ರವಾಗಿ ಅಧಿಕಾರ ನಡೆಸುವುದು ಕಷ್ಟ. ವಿವಿಧ ಪಕ್ಷಗಳ ಬಂಡಾಯಗಾರರು ಎಂಇಎಸ್ ಗೆ ಬೆಂಬಲ ನೀಡುವ ಸಾಧ್ಯತೆ ಕಡಿಮೆ.
ಒಟ್ಟಾರೆ, ಇದೇ ಮೊದಲ ಬಾರಿಗೆ ಭಾಷೆ ಬಿಟ್ಟು ನಡೆದಿರುವ ಚುನಾವಣೆ ಫಲಿತಾಂಶ ಕುತೂಹಲ ಮೂಡಿಸಿದೆ. ಇದು ಮುಂದಿನ ಚುನಾವಣೆಗಳಿಗೆ ಪಾಠವಾಗುವ ಜೊತೆಗೆ, ಎಂಇಎಸ್ ನಿರ್ನಾಮಕ್ಕೂ ಮುನ್ನುಡಿಯಾಗಬಹುದು.




