Breaking NewsLatestಮೆಟ್ರೋರಾಜ್ಯ

ಸಾರಿಗೆ ನಿಗಮ ಲಾಭದಾಯಕವಾಗಿಸಲು ಪರಿಣತರ ಸಮಿತಿ: ಸಿಎಂ ಬೊಮ್ಮಾಯಿ

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮವನ್ನು ಲಾಭದಾಯಕವಾಗಿಸಲು ಕೈಗೊಳ್ಳಬೇಕಾದ ಸುಧಾರಣಾ ಕ್ರಮಗಳ ಕುರಿತು ಪರಿಶೀಲಿಸಲು ಪರಿಣತರ ಸಮಿತಿ ರಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಶುಕ್ರವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ 60 ವರ್ಷದ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ನಿಗಮವು ಸಂಕಷ್ಟದಲ್ಲಿದೆ. ಆದರೆ ಸಮಸ್ಯೆಯನ್ನು ಬೆಳೆಯಲು ಬಿಡದೆ ನಾವು ಪರಿಹಾರ ಕಂಡುಕೊಳ್ಳಬೇಕಾಗಿದೆ. ಆದಾಯೋತ್ಪನ್ನ ಮಾದರಿಯಿದ್ದರೂ, ನಿಗಮ ನಷ್ಟದಲ್ಲಿರಲು ಕಾರಣಗಳನ್ನು ವಿಶ್ಲೇಷಿಸುವುದರೊಂದಿಗೆ, ನಿಗಮವನ್ನು ಲಾಭದಾಯಕವಾಗಿಸಲು ಸಲಹೆ ಸೂಚನೆಗಳನ್ನು ನೀಡಲು ಈ ಸಮಿತಿ ರಚಿಸಲಾಗುವುದು ಎಂದರು.

ಕೆ.ಎಸ್.ಆರ್.ಟಿ.ಸಿ. ಗೆ ತನ್ನದೇ ಅಂತರ್ಗತವಾದ ಶಕ್ತಿ ಇದೆ, ವಿಸ್ತಾರವಿದೆ, ಜಾಲವಿದೆ. ಇವುಗಳನ್ನು ಹೆಚ್ಚಿಸುವುದು ಹೇಗೆ ಎಂಬ ಕುರಿತು ಸಹ ಚಿಂತನೆ ನಡೆಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಕೋವಿಡ್ 19ರ ಸಂಕಷ್ಟದ ಅವಧಿಯಲ್ಲಿ ನೌಕರರ ವೇತನ ಸೇರಿದಂತೆ, ನಿಗಮಕ್ಕೆ ಬೆಂಬಲ ನೀಡಲು ರಾಜ್ಯ ಸರ್ಕಾರ 2300 ಕೋಟಿ ರೂ. ಬಿಡುಗಡೆ ಮಾಡಿದೆ. ತಾವು ಮುಖ್ಯಮಂತ್ರಿಯಾದ ನಂತರವೂ 108 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಮುಂದಿನ ದಿನಗಳಲ್ಲಿ ನಿಗಮದ ಆದಾಯ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕಾಗಿದೆ. ಇದಕ್ಕೆ ಚಿಂತನೆ, ಕಾರ್ಯವಿಧಾನಗಳಲ್ಲಿ ಬದಲಾವಣೆ ಅಗತ್ಯ; ಜೊತೆಗೆ ಕ್ಷಮತೆಯಿಂದ ನಿಗಮವನ್ನು ಮುನ್ನಡೆಸಲು ಸರ್ಕಾರ ಬದ್ಧವಾಗಿದೆ ಎಂದರು.

ನಿಗಮದ ಸುಧಾರಣೆಯೊಂದಿಗೆ ನೌಕರರ ಜೀವನಮಟ್ಟ ಸುಧಾರಣೆಗೂ ಆದ್ಯತೆ ನೀಡಲಾಗುವುದು. ಕೆ.ಎಸ್.ಆರ್.ಟಿ.ಸಿ.ಯೊಂದಿಗೆ ಜನತೆ ಭಾವನಾತ್ಮಕ ಬಾಂಧವ್ಯ ಬೆಸೆದಿದ್ದಾರೆ. ಬಸ್ ಎಂದರೆ ಹಲವು ಅರ್ಥಗಳನ್ನು ಧ್ವನಿಸುತ್ತದೆ- ಪ್ರಯಾಣ, ಜೀವನದ ಪ್ರಯಾಣ, ಎಲ್ಲರಿಗೂ ಸ್ಥಳಾವಕಾಶ ಒದಗಿಸುವ ಸಮಾನತೆಯ ಪರಿಕಲ್ಪನೆ, ನಿರಂತರ ಚಾಲನಾ ಶಕ್ತಿ ಮೊದಲಾದ ವಿಚಾರಗಳು ನಮ್ಮಲ್ಲಿ ಸುಳಿಯುತ್ತದೆ. ಸರ್ಕಾರದಲ್ಲಿ ನಿರಂತರ ಚಲನಶೀಲತೆ ಹೊಂದಿರುವ ಇಲಾಖೆ ಸಾರಿಗೆ ಇಲಾಖೆ ಎಂದು ಮುಖ್ಯಮಂತ್ರಿಗಳು ಬಣ್ಣಿಸಿದರು.

Related Articles

Leave a Reply

Your email address will not be published. Required fields are marked *

Back to top button