Breaking NewsLatestರಾಜಕೀಯರಾಷ್ಟ್ರೀಯ

ಪ್ರಬಲರ ಮಾತನ್ನಷ್ಟೇ ಕೇಳುವ ಮಾಧ್ಯಮಗಳು; ವರದಿಗಳಲ್ಲಿ ಕೋಮು ಧ್ವನಿ: ಸುಪ್ರೀಂ ಕೋರ್ಟ್ ಕಳವಳ

ನವದೆಹಲಿ: ವೆಬ್ ಪೋರ್ಟಲ್‌ಗಳು ಪ್ರಬಲರು ಹೇಳುವುದನ್ನಷ್ಟೇ ಕೇಳುವುದು ಮತ್ತು ನ್ಯಾಯಾಧೀಶರು ಅಥವಾ ಸಂಸ್ಥೆಗಳ ವಿರುದ್ಧ ಏನನ್ನಾದರೂ ಬರೆಯುವುದು ಆಗುತ್ತಿದೆ ಎಂದು ಸುಪ್ರೀಂ ಕೋರ್ಟ್ ಕಟುವಾಗಿ ಹೇಳಿದೆ.

ಕಳೆದ ವರ್ಷ ದೆಹಲಿಯಲ್ಲಿ ನಡೆದ ತಬ್ಲಿಘಿ ಜಮಾತ್ ಕೂಟದ ಕುರಿತ ಮಾಧ್ಯಮ ವರದಿಗಳ ವಿರುದ್ಧದ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಕೋವಿಡ್ ಮೊದಲ ಕೆಲವು ತಿಂಗಳುಗಳಲ್ಲಿ ಪ್ರಕರಣಗಳ ಹೆಚ್ಚಳ ಸಂಬಂಧ ಮಾಧ್ಯಮಗಳ ಒಂದು ವರ್ಗವು ಬಿತ್ತರಿಸಿದ ಸುದ್ದಿಗಳು ಕೋಮುವಾದದ ಧಾಟಿಯಲ್ಲಿದ್ದುದನ್ನು ಗಮನಿಸಿರುವ ನ್ಯಾಯಾಲಯ, ಇದು ದೇಶಕ್ಕೆ ಕೆಟ್ಟ ಹೆಸರನ್ನು ತರಬಹುದು ಎಂಬ ಆತಂಕ ವ್ಯಕ್ತಪಡಿಸಿದೆ.

ಯೂಟ್ಯೂಬ್, ಫೇಸ್​ಬುಕ್, ಟ್ವಿಟರ್​ಗಳನ್ನು ಹೆಸರಿಸಿರುವ ಸುಪ್ರೀಂ ಕೋರ್ಟ್, ಪೋರ್ಟಲ್​ಗಳು ಹೊಣೆಗೇಡಿತನ ತೋರಿಸುತ್ತಿವೆ ಎಂದಿದೆ.

ಈ ದೇಶದ ಎಲ್ಲವನ್ನೂ ಮಾಧ್ಯಮದ ಒಂದು ವಿಭಾಗವು ಕೋಮು ದೃಷ್ಟಿಕೋನದಿಂದ ತೋರಿಸುತ್ತದೆ. ಅದು ಸಮಸ್ಯೆಯಾಗಿದೆ. ಅಂತಿಮವಾಗಿ ಇದರಿಂದ ದೇಶಕ್ಕೆ ಕೆಟ್ಟ ಹೆಸರು ಬರಲಿದೆ ಎಂದು ಅಭಿಪ್ರಾಯಪಟ್ಟ ಸಿಜೆಐ ಎನ್ ವಿ ರಮಣ ಅವರು, ವೆಬ್‌ಸೈಟ್‌ಗಳು ಮತ್ತು ಟಿವಿ ಚಾನೆಲ್‌ಗಳಿಗೆ ಸಂಬಂಧಿಸಿದಂತೆ ನಿಯಂತ್ರಣ ವ್ಯವಸ್ಥೆ ಏನೆಂದು ಸರ್ಕಾರವನ್ನು ಪ್ರಶ್ನಿಸಿದರು.

ಇದಕ್ಕೆ ಸರ್ಕಾರದ ಪರವಾಗಿ ಉತ್ತರಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಕೋಮುವಾದಿ ಕೋನ ಮಾತ್ರವಲ್ಲ, ತಾವೇ ಹುಟ್ಟುಹಾಕುವ ಮತ್ತು ಸೂಳ್ಳು ಸುದ್ದಿಗಳನ್ನೂ ಅವು ಪ್ರಕಟಿಸುತ್ತವೆ ಎಂದು ಹೇಳಿದರು.

ಇಂಥ ಸುದ್ದಿಗಳನ್ನು ಬಿತ್ತರಿಸುವ ಪೋರ್ಟಲ್​ಗಳು ಪ್ರಭಾವಿಗಳಿಗೆ ಮಾತ್ರ ಹೆದರುತ್ತವೆಯೇ ಹೊರತು ನ್ಯಾಯಾಧೀಶರಿಗಾಗಲೀ ಸಂಸ್ಥೆಗಳು ಇಲ್ಲವೆ ಜನಸಾಮಾನ್ಯರಿಗಾಗಲೀ ಅಲ್ಲ ಎಂಬುದು ವಿದಿತವಾಗಿದೆ ಎಂದು ಸಿಜೆಐ ರಮಣ ಅಭಿಪ್ರಾಯಪಟ್ಟರು.

ವ್ಯಕ್ತಿಗಳ ವಿಚಾರ ಹಾಗಿರಲಿ, ಸಂಸ್ಥೆಗಳ ಬಗ್ಗೆಯೂ ಅತಿ ಕೆಟ್ಟದಾಗಿ ಬರೆಯಲಾಗುತ್ತಿದೆ ಎಂದು ಸಿಜೆಐ ಹೇಳಿದರು.

ಸಾಮಾಜಿಕ ಜಾಲತಾಣಗಳು ಮತ್ತು ವೆಬ್​ಸೈಟ್​ಗಳಲ್ಲಿನ ಸುಳ್ಳುಸುದ್ದಿಗಳ ಬಗ್ಗೆ ನ್ಯಾಯಾಲಯ ತೀವ್ರ ಕಳವಳ ವ್ಯಕ್ತಪಡಿಸಿತು.

ಪೋರ್ಟಲ್​ಗಳು ಮತ್ತು ಯೂಟ್ಯೂಬ್ ಚಾನೆಲ್​ಗಳಲ್ಲಿನ ಸುಳ್ಳುಸುದ್ದಿಗಳು ಮತ್ತು ಅಪಪ್ರಚಾರದ ಮೇಲೆ ಯಾವ ನಿಯಂತ್ರಣವೂ ಇಲ್ಲವಾಗಿದೆ. ಯೂಟ್ಯೂಬ್​ಗೆ ಹೋಗಿ ನೋಡಿದರೆ ಸುಳ್ಳು ಸುದ್ದಿಗಳು ಎಷ್ಟು ಅನಾಯಾಸವಾಗಿ ಪ್ರಸರಣಗೊಳ್ಳುತ್ತವೆ ಎಂಬುದು ಗೊತ್ತಾಗುತ್ತದೆ. ಯಾರು ಬೇಕಾದರೂ ಯೂಟ್ಯೂಬ್ ಚಾನೆಲ್ ಆರಂಭಿಸಬಹುದಾಗಿದೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು.

ತಬ್ಲಿಘಿ ಜಮಾತ್ ಕೂಟಕ್ಕೆ ಸಂಬಂಧಿಸಿದ ನಕಲಿ ಸುದ್ದಿಗಳ ಪ್ರಸಾರ ನಿಲ್ಲಿಸುವಂತೆ ಮತ್ತು ಅದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಬೇಕೆಂದು ಜಮೀಯತ್ ಉಲೆಮಾ-ಇ-ಹಿಂದ್ ನ್ಯಾಯಾಲಯವನ್ನು ಕೋರಿದೆ.

ಆನ್‌ಲೈನ್ ಸುದ್ದಿಗಳನ್ನು ನಿಯಂತ್ರಿಸುವ ಹೊಸ ಐಟಿ ನಿಯಮಗಳ ಕುರಿತು ವಿವಿಧ ಹೈಕೋರ್ಟ್‌ಗಳಿಂದ ಅರ್ಜಿಗಳನ್ನು ವರ್ಗಾಯಿಸಲು ಕೋರಿದ್ದ ಕೇಂದ್ರದ ಮನವಿ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್, ಆರು ವಾರಗಳ ಬಳಿಕ ವಿಚಾರಣೆ ನಡೆಸಲು ಸಮ್ಮತಿಸಿದೆ.

Spread the love

Related Articles

Leave a Reply

Your email address will not be published. Required fields are marked *

Back to top button