ಕೊಡಗುಜಿಲ್ಲಾ ಸುದ್ದಿ
ಐತಿಹಾಸಿಕ ಮೈಸೂರು ದಸರಾ – ಜಂಬೂ ಸವಾರಿಗೆ ಕೊಡಗಿನ ಏಳು ಆನೆಗಳ ಆಯ್ಕೆ
ಕೊಡಗು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿಗೆ ಕೊಡಗಿನ ದುಬಾರೆ ಸಾಕಾನೆ ಶಿಬಿರದ ಏಳು ಆನೆಗಳನ್ನು ಮೊದಲ ಹಂತದಲ್ಲಿ ಆಯ್ಕೆ ಮಾಡಲಾಗಿದೆ.
ಮೈಸೂರು ವನ್ಯಜೀವಿ ವಿಭಾಗದ ಡಿಎಫ್‌ಓ ವಿ.ಕರಿಕಳನ್ ನೇತೃತ್ವದಲ್ಲಿ ಅರಣ್ಯಾಧಿಕಾರಿಗಳ ತಂಡ ದುಬಾರೆ ಸಾಕಾನೆ ಶಿಬಿರಕ್ಕೆ ಭೇಟಿ ನೀಡಿ ಧನಂಜಯ್ಯ, ಗೋಪಿ, ಪ್ರಶಾಂತ್, ವಿಕ್ರಮ್, ಹರ್ಷ, ಲಕ್ಷ್ಮಣ, ಕಾವೇರಿ ಆನೆಗಳನ್ನು ದಸರಾ ಮಹೋತ್ಸವಕ್ಕೆ ಕಳುಹಿಸಿಕೊಡಲು ಗುರುತಿಸಿದ್ದಾರೆ. ಆನೆಗಳ ಆರೋಗ್ಯ, ಸದೃಢತೆ ಹಾಗೂ ದೃಷ್ಟಿದೋಷಗಳ ಬಗ್ಗೆ ಪರಿಶೀಲನೆ ನಡೆಸಿದ್ದು, ಅಂತಿಮವಾಗಿ ಬೆಂಗಳೂರು ವನ್ಯಜೀವಿ ವಿಭಾಗದ ಪಿಸಿಸಿಎಫ್ ಅವರು ಆಯ್ಕೆ ಮಾಡಲಿದ್ದಾರೆ.
ಈ ಸಂದರ್ಭ ಸೋಮವಾರಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎ.ನೇಹರು, ಕುಶಾಲನಗರ ವಲಯ ಅರಣ್ಯಾಧಿಕಾರಿ ಅನನ್ಯಕುಮಾರ್, ಪಶು ವೈದ್ಯ ಡಾ.ಚಿಟ್ಟಿಯಪ್ಪ, ದುಬಾರೆ ವಲಯದ ಉಪ ವಲಯ ಅರಣ್ಯಾಧಿಕಾರಿ ರಂಜನ್ ಮತ್ತು ಸಿಬ್ಬಂದಿ ಹಾಗೂ ಮಾವುತರು, ಕಾವಾಡಿಗರು ಹಾಜರಿದ್ದರು.




