Breaking Newsಜಿಲ್ಲಾ ಸುದ್ದಿ

ಮಡಿಕೇರಿ – ಮೈಸೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ : 2022ರ ಜೂನ್‌ನಲ್ಲಿ ಕಾಮಗಾರಿ ಆರಂಭ

ಕೊಡಗು: ಬಹು ನಿರೀಕ್ಷಿತ ಮೈಸೂರು – ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯ ನಿರ್ಮಾಣ ಕಾರ್ಯ ಮುಂದಿನ ವರ್ಷದ ಜೂನ್‌ ನಿಂದ ಆರಂಭಗೊಳ್ಳಲಿದೆ. ಸುಮಾರು 3883 ಕೋಟಿ ರೂಪಾಯಿಗಳ ವೆಚ್ಚದ ಈ ಯೋಜನೆ ಜಾರಿಗೆ ಬಂದರೆ ಬೆಂಗಳೂರು – ಮಡಿಕೇರಿ ನಡುವಿನ ಪ್ರಯಾಣದ ಅವಧಿ ಈಗಿನ 6 ಗಂಟೆಗಳಿಂದ 3.5 ಗಂಟೆಗಳಿಗೆ ಇಳಿಕೆಯಾಗಲಿದೆ ಹಾಗೂ ಮಡಿಕೇರಿ – ಮೈಸೂರು ಪ್ರಯಾಣದ ಅವಧಿ 3 ಗಂಟೆಗಳಿಂದ 90 ನಿಮಿಷಕ್ಕೆ ಇಳಿಕೆಯಾಗಲಿದೆ.

ಈ ಉದ್ದೇಶಿತ ಹೆದ್ದಾರಿಯಲ್ಲಿ ಸುಮಾರು 2733 ಕೋಟಿ ರೂಪಾಯಿಗಳನ್ನು ನಿರ್ಮಾಣ ಕಾರ್ಯಕ್ಕೆ ಬಳಸಲಾಗುವುದಲ್ಲದೆ ಭೂ ಸ್ವಾಧೀನ ಕಾರ್ಯದ ಪರಿಹಾರ ನೀಡಲು 1150 ಕೋಟಿ ರೂಪಾಯಿಗಳು ವೆಚ್ಚವಾಗಲಿದೆ. ಈ ಉದ್ದೇಶಿತ ರಸ್ತೆ ಶ್ರೀರಂಗ ಪಟ್ಟಣದ ಪಶ್ಚಿಮ ವಾಹಿನಿಯ ಬಳಿಯಿಂದ ಆರಂಭಗೊಂಡು ಮಡಿಕೇರಿವರೆಗೆ ತಲುಪಲಿದೆ.

ಈಗ ಬೆಂಗಳೂರು -ಮೈಸೂರು ಎಕ್ಸ್‌ಪ್ರೆಸ್‌ ವೇ ಕಾಮಗಾರಿ ಭರದಿಂದ ಸಾಗಿದ್ದು ಇದು ಮುಂದಿನ ಸೆಪ್ಟೆಂಬರ್‌ ವೇಳೆಗೆ ಮುಗಿಯಲಿದೆ. ಈ 8000 ಕೋಟಿ ರೂಪಾಯಿಗಳ 6 ಪಥಗಳ ಹೆದ್ದಾರಿಯಿಂದ ಬೆಂಗಳೂರು – ಮೈಸೂರು ನಡುವಿನ ಪ್ರಯಾಣದ ಅಂತರ ಈಗಿನ 3 ಘಂಟೆಗಳಿಂದ 90 ನಿಮಿಷಗಳಿಗೆ ಇಳಿಕೆ ಆಗಲಿದೆ. ಆದರೆ 90 ನಿಮಿಷದ ಅವಧಿಯಲ್ಲಿ ಮೈಸೂರಿನಿಂದ ಕೆಂಗೇರಿವರೆಗೆ ಮಾತ್ರ ತಲುಪಬಹುದಾಗಿದ್ದು ಮೆಜೆಸ್ಟಿಕ್‌ ತಲುಪಲು ಇನ್ನೂ 30 ರಿಂದ 40 ನಿಮಿಷಗಳ ಕಾಲಾವಕಾಶ ಬೇಕಾಗುತ್ತದೆ. ಈ ಹೆದ್ದಾರಿಗೆ ಮಡಿಕೇರಿ ರಸ್ತೆಯು ಸಂಪರ್ಕಗೊಳ್ಳಲಿದೆ. ಉದ್ದೇಶಿತ ಮೈಸೂರು – ಮಡಿಕೇರಿ ರಸ್ತೆಯು ಪೂರ್ಣಗೊಂಡಲ್ಲಿ ಬೆಂಗಳೂರು – ಮಂಗಳೂರಿನ ನಡುವಿನ ಪ್ರಯಾಣದ ಅವಧಿಯೂ ಗಣನೀಯವಾಗಿ ಕಡಿಮೆ ಆಗಲಿದ್ದು ರಸ್ತೆಯ ದಟ್ಟಣೆಯೂ ಹೆಚ್ಚಲಿದೆ.

ಈ ಕುರಿತು ಮಾತನಾಡಿದ ಈ ಯೋಜನೆಯ ವಿಶೇಷ ಭೂ ಸ್ವಾಧೀನಾಧಿಕಾರಿ ದೇವರಾಜ್‌ ಅವರು ಮೈಸೂರು -ಮಡಿಕೇರಿ ಉದ್ದೇಶಿತ ಹೆದ್ದಾರಿ ಯೋಜನೆಯ ಅನುಷ್ಠಾನಕ್ಕಾಗಿ ಕಳೆದ ವರ್ಷವೇ ಮೈಸೂರಿನ ಚಾಮುಂಡಿಪುರಂ ನಲ್ಲಿ ಭೂಸ್ವಾಧೀನ ಕಚೇರಿ ತೆರೆಯಲಾಗಿದೆ. ಈಗಾಗಲೇ ಮೈಸೂರಿನಿಂದ ಮಡಿಕೇರಿಯವರೆಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಜಂಟಿ ಸರ್ವೆ ಕಾರ್ಯವನ್ನೂ ಮುಗಿಸಿದ್ದು , ಮೈಸೂರು ಮತ್ತು ಹುಣಸೂರು ತಾಲ್ಲೂಕುಗಳ ಹೆದ್ದಾರಿ ಹಾದು ಹೋಗುವ ಭಾಗದ ಭೂ ಮಾಲೀಕರಿಗೆ ಪರಿಹಾರ ನೀಡಲು ನೋಟಿಫಿಕೇಷನ್‌ ಕೂಡ ಹೊರಡಿಸಲಾಗಿದೆ. ಪಿರಿಯಾಪಟ್ಟಣ, ಕುಶಾಲನಗರ ಮತ್ತು ಮಡಿಕೇರಿ ತಾಲ್ಲೂಕುಗಳ ಭೂ ಮಾಲೀಕರಿಗೆ ಪರಿಹಾರ ನೀಡುವ ಸಂಬಂಧದ ನೋಟಿಪೀಕೇಷನ್‌ ಹೊರಡಿಸಬೇಕಿದೆ.

ಈ ಉದ್ದೇಶಿತ ಹೆದ್ದಾರಿಯು ಸಂಪೂರ್ಣ ಟೋಲ್‌ ಹೆದ್ದಾರಿ ಆಗಿರುತ್ತದೆ. ಇದಕ್ಕೆ ಗುಡ್ಡೆಹೊಸೂರು , ಸುಂಟಿಕೊಪ್ಪ, ಕುಶಾಲನಗರ , ಪಿರಿಯಾಪಟ್ಟಣ , ಹುಣಸೂರಿನಿಂದ ಮಾತ್ರ ಸಂಪರ್ಕ ಇರುತ್ತದೆ. ಈ ಹೆದ್ದಾರಿಗೆ ಸರ್ವೀಸ್‌ ರಸ್ತೆ ನಿರ್ಮಿಸಲಾಗುವುದಿಲ್ಲ. ಈ ಉದ್ದೇಶಿತ ರಸ್ತೆ ನಿರ್ಮಾಣವಾದರೂ ಈಗಿರುವ ಹಾಲಿ ಬೆಂಗಳೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿಯು ಹಾಗೆ ಇರಲಿದೆ ಎಂದು ಹೆದ್ದಾರಿ ಪ್ರಾಧಿಕಾರದ ಮೂಲಗಳು ತಿಳಿಸಿವೆ.

Spread the love

Related Articles

Leave a Reply

Your email address will not be published. Required fields are marked *

Back to top button