ಕೊಳೆರೋಗಕ್ಕೆ ಅಡಿಕೆ ಬೆಳೆ ನಾಶ; ಬೆಳೆಗಾರರ ಬದುಕು ಕಷ್ಟ

ಕೊಳೆರೋಗ ತರುವ ಶಿಲೀಂಧ್ರಗಳ ನಿಯಂತ್ರಣಕ್ಕೆ ಮಣ್ಣು ಪರೀಕ್ಷೆ ಮಾಡಬೇಕು. ಆದರೆ ಮಳೆಗಾಲದಲ್ಲಿ ಮಣ್ಣು ಪರೀಕ್ಷೆ ಮಾಡುವ ಯಾವ ವಿಧಾನವೂ ತೋಟಗಾರಿಕೆ ಇಲಾಖೆ ಬಳಿ ಇಲ್ಲ. ಕೊಳೆರೋಗಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದ ವಿಜ್ಞಾನಿಗಳು, ಇಲಾಖೆಗಳು ಬೆಳೆಗಾರರ ಪಾಲಿಗೆ ಇದ್ದೂ ಇಲ್ಲದಂತಾಗಿವೆ.
ಕಿರುಗುಂದ ರಫೀಕ್
ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ವರ್ಷದಿಂದ ವರ್ಷಕ್ಕೆ ಅಡಕೆ ಬೆಳೆಯ ಕೊಳೆರೋಗ ಹೆಚ್ಚಾಗುತ್ತಿದೆ. ಎಲ್ಲ ತಾಲೂಕುಗಳಲ್ಲಿ ಮಳೆ ವೈಪರೀತ್ಯದಿಂದ ಅಡಕೆಗೆ ಹಿಂದೆಂದೂ ಕಾಣದಷ್ಟು ಕೊಳೆರೋಗ ವ್ಯಾಪಿಸಿದೆ. ಕೊಳೆರೋಗಕ್ಕೆ ತುತ್ತಾಗಿ ಬಹುಪಾಲು ಅಡಕೆ ಉದುರಿ ಹೋಗುತ್ತಿವೆ. ಅಡಕೆಗೆ ಅತ್ಯುತ್ತಮ ಬೆಲೆಯಿದ್ದರೂ ಬೆಳೆ ಉಳಿಸಿಕೊಳ್ಳಲಾಗದೆ ಬೆಳೆಗಾರರು ಕೈಕೈ ಹಿಸುಕಿಕೊಳ್ಳುವಂತಾಗಿದೆ.
ಅಡಕೆ ಮರದ ಗೊನೆಗಳಲ್ಲಿ ಕನಿಷ್ಠ ಒಂದೆರಡು ಅಡಕೆಯೂ ಇಲ್ಲದಂತೆ ಉದುರಿ ಹೋಗುತ್ತಿವೆ. ಅಡಕೆಯನ್ನೇ ಅವಲಂಬಿಸಿರುವ ಸಾವಿರಾರು ಕುಟುಂಬಗಳಿವೆ. ಬಹುತೇಕ ಸಣ್ಣ ಮತ್ತು ಅತಿಸಣ್ಣ ಬೆಳೆಗಾರರೇ ಅಡಕೆ ತೋಟ ಮಾಡಿದ್ದು, ಬೆಳೆ ನಾಶದಿಂದ ಅವರ ಮುಂದಿನ ಬದುಕು ಕಷ್ಟಕರವಾಗಿದೆ.

ಸರ್ಕಾರ ಪ್ರತಿವರ್ಷ ಕೋಟ್ಯಂತರ ರೂಪಾಯಿ ಕೊಳೆ ನಿಯಂತ್ರಣಕ್ಕಾಗಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಖರ್ಚು ಮಾಡುತ್ತಿದೆ. ಆದರೆ ಇದರಿಂದ ಪ್ರಯೋಜನವೇ ಕಾಣುತ್ತಿಲ್ಲ. ಈಗ ನೀಡುತ್ತಿರುವ ಮೈಲುತುತ್ತದ ಗುಣಮಟ್ಟದ ಬಗ್ಗೆ ಅನುಮಾನಗಳಿವೆ. ಕೊಳೆರೋಗ ತರುವ ಶಿಲೀಂಧ್ರಗಳ ನಿಯಂತ್ರಣಕ್ಕೆ ಮಣ್ಣು ಪರೀಕ್ಷೆ ಮಾಡಬೇಕು. ಆದರೆ ಮಳೆಗಾಲದಲ್ಲಿ ಮಣ್ಣು ಪರೀಕ್ಷೆ ಮಾಡುವ ಯಾವ ವಿಧಾನವೂ ತೋಟಗಾರಿಕೆ ಇಲಾಖೆ ಬಳಿ ಇಲ್ಲ. ಕೊಳೆರೋಗಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದ ವಿಜ್ಞಾನಿಗಳು, ಇಲಾಖೆಗಳು ಬೆಳೆಗಾರರ ಪಾಲಿಗೆ ಇದ್ದೂ ಇಲ್ಲದಂತಾಗಿವೆ.
ಈಗ ಬಳಸುತ್ತಿರುವ ರಾಸಾಯನಿಕಗಳ ಬಳಕೆಯಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ಅನೇಕ ಬಾರಿ ಬೋರ್ಡೋ ಸಿಂಪಡನೆ ನಡೆದಿದ್ದರೂ ಕೊಳೆ ನಿಯಂತ್ರಣಕ್ಕೆ ಬರುತ್ತಿಲ್ಲ. ಸಾಂಪ್ರದಾಯಿಕವಾದ ಮೈಲುತುತ್ತದ ಬೋರ್ಡೋ ದ್ರಾವಣ ಪರಿಣಾಮಕಾರಿಯಾಗುತ್ತಿಲ್ಲ ಎಂದು ರೈತರು ದೂರಿದ್ದಾರೆ.
ಅಡಕೆ ಉಳಿಸಲು ಹೊಸ ಸಂಶೋಧನೆ ಅಗತ್ಯ:
ಅಡಕೆ ಬೆಳೆ ಉಳಿಸಿಕೊಳ್ಳಲು ವೈಜ್ಞಾನಿಕವಾದ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕಾಗಿದೆ. ಆದ್ದರಿಂದ ಕೃಷಿ ವಿಜ್ಞಾನಿಗಳು ತುರ್ತು ಕ್ರಮ ಕೈಗೊಂಡು ಕೊಳೆ ನಿಯಂತ್ರಣಕ್ಕೆ ಹೊಸ ಸಂಶೋಧನೆಗೆ ಮುಂದಾಗಬೇಕು ಎಂದು ಬೆಳೆಗಾರರು ಒತ್ತಾಯಿಸಿದ್ದಾರೆ.
ಬೆಳೆನಾಶವಾಗಿರುವ ಬೆಳೆಗಾರರ ಕುಟುಂಬಕ್ಕೆ ಸರ್ಕಾರ ತಕ್ಷಣ ಅತೀಹೆಚ್ಚು ಪರಿಹಾರ ಒದಗಿಸಬೇಕು. ಸರ್ಕಾರ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳಿಗೆ ಮತ್ತು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ವಿಜ್ಞಾನಿಗಳಿಗೆ ನಿಗದಿತ ಅವಧಿಯಲ್ಲಿ ಕೊಳೆರೋಗಕ್ಕೆ ಔಷಧಿ ಕಂಡು ಹಿಡಿಯಲು ಸೂಚನೆ ನೀಡಬೇಕು ಎಂದು ಆಗ್ರಹಪಡಿಸಿದ್ದಾರೆ.

“ಮಲೆನಾಡು ಭಾಗದಲ್ಲಿ ಅಡಕೆ ಬೆಳೆ ಪ್ರತಿವರ್ಷ ಕೊಳೆರೋಗಕ್ಕೆ ತುತ್ತಾಗುತ್ತಿದೆ. ಅತಿವೃಷ್ಟಿಯಿಂದ ಮಲೆನಾಡಿನ ಭಾಗದ ಅಡಕೆ ಬೆಳೆಗಾರರು ಬದುಕು ನಲುಗಿ ಹೋಗಿದೆ.”
-ಸಂತೋಷ್ ಅತ್ತಿಗೆರೆ



