ಕೊಡಗುಜಿಲ್ಲಾ ಸುದ್ದಿ

ಕೇರಳದಲ್ಲಿ ಕೊರೊನಾ ಹೆಚ್ಚಳ : ಕೊಡಗಿನಲ್ಲಿ ರಾತ್ರಿ-ವಾರಾಂತ್ಯ ಕರ್ಫ್ಯೂ ಆ.30ರ ವರೆಗೆ ವಿಸ್ತರಣೆ

ಕೊಡಗು : ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರಕಾರದ ಆದೇಶದಂತೆ ಕೊಡಗು ಜಿಲ್ಲೆಯಲ್ಲಿ ಪ್ರತಿ ದಿನ ರಾತ್ರಿ 9 ಗಂಟೆಯಿಂದ ಮರುದಿನ ಬೆಳಗ್ಗೆ 5 ಗಂಟೆಯವರೆಗೆ ರಾತ್ರಿ ಕರ್ಫ್ಯೂ ಮತ್ತು ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ವಾರಾಂತ್ಯ ಕರ್ಫ್ಯೂ ಜಾರಿಗೊಳಿಸಲಾಗಿದೆ.

ಈ ಆದೇಶವು‌ ಆ.30ರ ಬೆಳಗ್ಗೆ 6 ಗಂಟೆಯವರೆಗೆ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ತಿಳಿಸಿದ್ದಾರೆ. ರಾತ್ರಿ ಕರ್ಫ್ಯೂ ಅವಧಿಯಲ್ಲಿ ತುರ್ತು, ಅತ್ಯವಶ್ಯಕ, ವೈದ್ಯಕೀಯ ಮತ್ತು ಕೋವಿಡ್ ಕರ್ತವ್ಯದಲ್ಲಿ ತೊಡಗಿರುವ ಸೇವೆಗಳಿಗೆ ಮಾತ್ರ ಅವಕಾಶ ಇರುತ್ತದೆ. ವಾರಾಂತ್ಯ ಕರ್ಫ್ಯೂ ಅವಧಿಯಲ್ಲಿ ಈ ಕೆಳಕಂಡ ತುರ್ತು, ಅತ್ಯವಶ್ಯಕ ಚಟುವಟಿಕೆಗಳಿಗೆ ಮಾತ್ರ ಅವಕಾಶ ಇರುತ್ತದೆ ಎಂದು ಅವರು ಹೇಳಿದ್ದಾರೆ.

ವಾರಾಂತ್ಯ ಕರ್ಫ್ಯೂ ಸಮಯದಲ್ಲಿ ಎಲ್ಲಾ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಧೀನದ ಕಚೇರಿಗಳು, ಸ್ವಾಯತ್ತ ಸಂಸ್ಥೆಗಳು, ಕಾರ್ಪೋರೇಷನ್ ಇತ್ಯಾದಿಗಳು, ತುರ್ತು ಮತ್ತು ಅತ್ಯವಶ್ಯಕ ಸೇವೆಗಳು ಹಾಗೂ ಕೋವಿಡ್ 19 ನಿಯಂತ್ರಣ ಕಾರ್ಯದಲ್ಲಿ ತೊಡಗಿರುವ ಇಲಾಖೆ / ಕಚೇರಿಗಳ ಅಧಿಕಾರಿ ಮತ್ತು ಸಿಬ್ಬಂದಿಗಳ ಕರ್ತವ್ಯ ನಿಮಿತ್ತ ಓಡಾಟಕ್ಕೆ ಅಡ್ಡಿ ಇರುವುದಿಲ್ಲ.
ತುರ್ತು ಮತ್ತು ಅತ್ಯವಶ್ಯಕ ಸೇವೆಗಳನ್ನು ನೀಡುವ ಎಲ್ಲಾ ಕೈಗಾರಿಕೆ, ಕಂಪೆನಿಗಳು, ಸಂಸ್ಥೆಗಳ ಕಾರ್ಯಾಚರಣೆ ಹಾಗೂ ಅದರ ಸಿಬ್ಬಂದಿಗಳ ಓಡಾಟಕ್ಕೆ ಅಡ್ಡಿ ಇರುವುದಿಲ್ಲ. ಆದಾಗ್ಯೂ ಅವರುಗಳು ಸಂಸ್ಥೆ ನೀಡಿರುವ ಅಧಿಕೃತ ಗುರುತಿನ ಚೀಟಿಯನ್ನು ಹೊಂದಿರತಕ್ಕದ್ದು.

ವೈದ್ಯಕೀಯ ಸೇವೆಯ ಸಂಬಂಧ ರೋಗಿಯೊಂದಿಗೆ ರೋಗಿಯ ಉಪಚಾರಕರ ಓಡಾಟಕ್ಕೆ ಅಡ್ಡಿ ಇರುವುದಿಲ್ಲ. ಕೋವಿಡ್ ಮಾರ್ಗಸೂಚಿಯನ್ನು ಪಾಲಿಸುತ್ತಾ, ಆಹಾರ, ದಿನಸಿ, ಹಣ್ಣು ಮತ್ತು ತರಕಾರಿ, ಮಾಂಸ ಮತ್ತು ಮೀನು, ಡೈರಿ ಮತ್ತು ಹಾಲಿನ ಬೂತ್ ಗಳು, ಪಶು ಆಹಾರ ಮಳಿಗೆಗಳು, ಬೀದಿ ಬದಿ ವ್ಯಾಪಾರಿಗಳಿಗೆ, ಪಡಿತರ ನ್ಯಾಯ ಬೆಲೆ ಮಳಿಗೆ, ಸ್ಟಾಂಡ್ ಅಲೋನ್ ಮದ್ಯ ಮಾರಾಟ ಮಳಿಗೆ ( ಟೇಕ್ ಅವೇ ರೂಪದಲ್ಲಿ) ಬೆಳಗ್ಗೆ 5 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಕಾರ್ಯಾಚರಿಸಲು ಅವಕಾಶ ಇರುತ್ತದೆ. ಆದರೆ ಹೋಂ ಡೆಲಿವರಿ ಪದ್ಧತಿಗೆ ಉತ್ತೇಜನ ನೀಡುವಂತೆ ಅವರು ಸೂಚಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button