ಮಾಂದಲಪಟ್ಟಿ ಸಂಪೂರ್ಣ ನೀಲಮಯ : ನೀಲಕುರುಂಜಿ ಹೂಗಳ ಸೌಂದರ್ಯಕ್ಕೆ ಪ್ರವಾಸಿಗರು ಪಿಧಾ

ಕೊಡಗು : ಕೊಡಗು ಪ್ರಕೃತಿಯ ತವರೂರು. ಇಲ್ಲಿ ಪ್ರಕೃತಿಯ ಸೌಂದರ್ಯದ ಜೊತೆ ಜೊತೆಗೆ ಅನೇಕ ವಿಸ್ಮಯಗಳನ್ನು ಸಹ ಕಾಣಬಹುದಾಗಿದೆ. ಇದಕ್ಕೆ ಈಗಿನ ಉತ್ತಮ ಉದಾಹರಣೆ ಎಂದರೆ ನೀಲಕುರುಂಜಿ ಹೂವುಗಳು. ಕೊಡಗಿನ ಮಾಂದಲಪಟ್ಟಿಯಲ್ಲಿ 12 ವರ್ಷಗಳ ಬಳಿಕ ನೀಲಕುರುಂಜಿ ಹೂವುಗಳು ಅರಳಿವೆ. ನೀಲಿ ಹೂಗಳ ಮಾದಕ ಚೆಲುವಿನಿಂದ ಮಾಂದಲಪಟ್ಟಿ ಬೆಟ್ಟವೂ ಸಂಪೂರ್ಣವಾಗಿ ನೀಲಿ ಬಣ್ಣದಿಂದ ಕಂಗೊಳಿಸುತ್ತಿದೆ. ಕೊಡಗಿನಲ್ಲಿ ಕೊರೊನಾ ಅಬ್ಬರ ಜೋರಾಗಿ ಇದ್ದರೂ, ಪ್ರವಾಸಿಗರ ಸಂಖ್ಯೆ ಕಡಿಮೆ ಇಲ್ಲ.
ಮಾಂದಲಪಟ್ಟಿ ಬೆಟ್ಟದ ಮೇಲೆ ನೀಲಿಕುರಿಂಜಿ ಹೂವುಗಳು ಅರಳಿದ್ದು, ಗುಂಪಾಗಿ ಗಿಡದ ತುಂಬ ಅರಳಿರುವ ಈ ಹೂಗಳನ್ನು ಇನ್ನೂ ಕೆಲವು ದಿನಗಳ ಕಾಲ ನೋಡಲು ಸಿಗಲಿವೆ. ಪ್ರವಾಸಿಗರು ಬೆಟ್ಟದತ್ತ ಹೂವುಗಳ ಸೌಂದರ್ಯ ಆಸ್ವಾದಿಸಲು ಆಗಮಿಸುತ್ತಿದ್ದಾರೆ.
ನೀಲಕುರುಂಜಿ ಗಿಡ ಸ್ಟ್ರೊಬಿಲಂತಸ್ ಜಾತಿಗೆ ಸೇರಿದೆ. ನೀಲಕುರುಂಜಿ ಹೂವು ಹೆಚ್ಚಾಗಿ ದಕ್ಷಿಣ ಭಾರತದಲ್ಲಿರುವ ನೀಲಗಿರಿ ಬೆಟ್ಟದಲ್ಲಿರುವ ಸೋಲಾ ಕಾಡಿನಲ್ಲಿ ಕಂಡು ಬರುತ್ತದೆ. ಇದರ ವೈಜ್ಞಾನಿಕ ಹೆಸರು ಸ್ಟ್ರೊಬಿಲಂಥೆಸ್ ಕುಂತಿಯಾನ. ನೀಲಗಿರಿ ಬೆಟ್ಟವನ್ನು ಈ ಹೆಸರಿನಲ್ಲಿ ಗುರುತಿಸಲ್ಪಡಲು ಈ ಹೂವೇ ಕಾರಣ ಏಕೆಂದರೆ ಈ ಹೂವು ಅರಳಿದಾಗ ಇದು ನೀಲಿ ಬಣ್ಣದಲ್ಲಿರುತ್ತದೆ. ಈ ಹೂವು ಹನ್ನೆರಡು ವರ್ಷಗಳಿಗೆ ಒಮ್ಮೆ ಅರಳುತ್ತದೆ.
ಹತ್ತೊಂಬತ್ತನೇ ಶತಮಾನದಲ್ಲಿ ಕ್ರಿಶ್ಚಿಯನ್ ಗಾಟ್ಫ್ರೈಡ್ ಡೇನಿಯಲ್ ನೀಸ್ ವಾನ್ ಎಸೆನ್ಬೆಕ್ ಎಂಬ ವ್ಯಕ್ತಿ ಈ ಹೂವನ್ನು ಮೊದಲು ಗುರುತಿಸಿದ್ದರು. ಈ ಕುರುಂಜಿ ಹೂವು ೨೫೦ ಜಾತಿಗಳಲ್ಲಿ ಕಂಡುಬರುತ್ತದೆ. ಅದರಲ್ಲಿ 46 ಜಾತಿಯ ಹೂವುಗಳು ನಮ್ಮ ಭಾರತ ದೇಶದಲ್ಲಿ ಕಂಡುಬರುತ್ತದೆ. ಸಾಮಾನ್ಯವಾಗಿ ಹನ್ನೆರಡು ವರ್ಷಗಳಿಗೊಮ್ಮೆ ಅರಳುವ ಈ ಹೂವಿನ ಜಾತಿಯಲ್ಲಿ ಕೆಲವು ವಿಚಿತ್ರ ಜಾತಿಯ ಹೂವುಗಳಿವೆ. ಅವು ಹನ್ನೆರಡು ವರ್ಷಗಳ ಬದಲಿಗೆ ಹದಿನಾರು ವರ್ಷಗಳಿಗೊಮ್ಮೆ ಅರಳುತ್ತದೆ. ದೀರ್ಘ ಕಾಲಗಳಿಗೊಮ್ಮೆ ಅರಳುವ ಈ ರೀತಿಯ ಹೂಗಳನ್ನು ಪಿಲಿಟೆಸಿಯಲ್ಸ್ ಅಂದು ಕರೆಯುತ್ತಾರೆ. ಈ ಹೂವಿನ ಸೌಂದರ್ಯ ವನ್ನು ಸವಿಯಲು ಪ್ರಪಂಚದ ನಾನಾ ಭಾಗಗಳಿಂದ ಬರುತ್ತಾರೆ. ಇದರಿಂದ ನೀಲಗಿರಿ ಬೆಟ್ಟವು ಒಂದು ಪ್ರವಾಸಿ ತಾಣವಾಗಿದೆ.




