Breaking NewsLatestಮೆಟ್ರೋರಾಜ್ಯಸುದ್ದಿ

ಪಡಿತರ ಚೀಟಿ ಇರುವ ಪ್ರತಿ ಮನೆಗೆ ವಿದ್ಯುತ್: ಇಂಧನ ಸಚಿವ ಸುನೀಲ್ ಕುಮಾರ್

ಬೆಂಗಳೂರು: ಪಡಿತರ ಚೀಟಿ ಇರುವ ಎಲ್ಲ ಮನೆಗಳಿಗೂ ವಿದ್ಯುತ್ ಸಂಪರ್ಕ ನೀಡುವುದನ್ನೂ ಒಳಗೊಂಡಂತೆ ಆಯವ್ಯಯದಲ್ಲಿ ಘೋಷಿಸಿರುವ ಎಲ್ಲಾ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಆದ್ಯತೆ ನೀಡಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.

ಕಾವೇರಿ ಭವನದಲ್ಲಿರುವ ಕೆಪಿಟಿಸಿಎಲ್ ಕಚೇರಿಯ ಸಮ್ಮೇಳನ ಸಭಾಂಗಣದಲ್ಲಿ ಇಂಧನ ಇಲಾಖೆ, ವಿದ್ಯುತ್ ಸರಬರಾಜು ಕಂಪನಿಗಳು ಮತ್ತು ಅದರ ಅಂಗ ಸಂಸ್ಥೆಗಳ ಕಾರ್ಯ ನಿರ್ವಹಣೆಯ ಪರಾಮಾರ್ಶೆ ಸಭೆ ನಡೆಸಿ ಮಾತನಾಡಿದರು.

ಬಜೆಟ್​ನಲ್ಲಿ ಘೋಷಿಸಿರುವ ಕಾರ್ಯಕ್ರಮಗಳು ಮತ್ತು ಕೇಂದ್ರ ಸರ್ಕಾರದ ಸಹಯೋಗದ ಯೋಜನೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಇದರಲ್ಲಿ ನಾನು ಯಾವುದೇ ಕಾರಣಕ್ಕೆ ರಾಜಿಯಾಗುವುದಿಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಟ್ರಾನ್ಸ್​​ ಫಾರ್ಮರ್​​ಗಳ ದುರಸ್ಥಿ, ಬದಲಾವಣೆ ಕುರಿತಂತೆ ಬಹಳಷ್ಟು ದೂರುಗಳು ಬರುತ್ತವೆ. ಅವುಗಳ ಬಗ್ಗೆ ತಕ್ಷಣವೇ ಕ್ರಮಕೈಗೊಳ್ಳಬೇಕು. ಟ್ರಾನ್ಸ್ಫಾರ್ಮರ್ಗಳ ಬದಲಾವಣೆ ಮಾಡಲು ವಿಳಂಬ ಮಾಡಬಾರದೆಂದು ಸೂಚಿಸಿದರು. ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ ಸಲ್ಲಿಕೆಯಾಗಬೇಕಾಗಿರುವ ಪ್ರಸ್ತಾವನೆಗಳನ್ನೂ ಸಹ ಯಾವುದೇ ವಿಳಂಬ ಮಾಡದೇ ನಿಗದಿತ ಕಾಲಾವಧಿಯೊಳಗೆ ಸಲ್ಲಿಸಲು ಕ್ರಮಕೈಗೊಳ್ಳಬೇಕು ಎಂದರು.

ಗಂಗಾ ಕಲ್ಯಾಣ ಯೋಜನೆಯಡಿ ವಿದ್ಯುತ್ ಸಂಪರ್ಕ ನೀಡುವ ಕೆಲಸವೂ ಸಹ ಕಾಲಮಿತಿಯೊಳಗೆ ಮತ್ತು ಪರಿಣಾಮಕಾರಿಯಾಗಿ ಆಗಬೇಕು. ಅನಧಿಕೃತ ಸಂಪರ್ಕ, ವಿದ್ಯುತ್ ಸೋರಿಕೆ, ವಿದ್ಯುತ್ ಸಂಪರ್ಕ ನೀಡುವಲ್ಲಿ ವಿಳಂಬ, ಮೀಟರ್ಗಳ ಅಳವಡಿಕೆಯಲ್ಲಿ ಆಗುವ ವಿಳಂಬ ಇತ್ಯಾದಿ ಕಾರಣಗಳಿಂದ ಇಂಧನ ಸರಬರಾಜು ಕಂಪನಿಗಳಿಗಾಗುವ ನಷ್ಟ ತಡೆಯಲು ಕಾರ್ಯಯೋಜನೆ ರೂಪಿಸಬೇಕು. ಅದನ್ನು ಅನುಷ್ಠಾನಗೊಳಿಸಲು ಎಲ್ಲಾ ವಿಧವಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಹೇಳಿದರು.

ಕೃಷಿ ಮತ್ತು ಕೈಗಾರಿಕೆಗಳಿಗೆ ಮತ್ತು ಎಲ್ಲಾ ವರ್ಗದ ಗ್ರಾಹಕರಿಗೆ ಗುಣಮಟ್ಟದ ವಿದ್ಯುತ್ ಪೂರೈಕೆ ಹಾಗೂ ಸಮರ್ಪಕ ವಿದ್ಯುತ್ ಸರಬರಾಜು ನಮ್ಮ ಆದ್ಯತೆಯಾಗಬೇಕು ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

ವಿದ್ಯುತ್ ರೀಚಾರ್ಜ್ ಕೇಂದ್ರಗಳ ಆರಂಭಕ್ಕೆ ಆದ್ಯತೆ

ವಿದ್ಯುತ್ ಚಾಲಿತ ವಾಹನಗಳು ಹೆಚ್ಚಾಗಿ ಬರುತ್ತಿರುವುದರಿಂದ ವಿದ್ಯುತ್ ವಾಹನ ಚಾರ್ಜಿಂಗ್ ಕೇಂದ್ರಗಳನ್ನು ಆರಂಭಿಸಲು ಆದ್ಯತೆ ನೀಡಬೇಕು. ಈಗಾಗಲೇ ಗುರುತಿಸಿರುವ ಸ್ಥಳಗಳಲ್ಲಿ ವಿದ್ಯುತ್ ರೀಚಾರ್ಜಿಂಗ್ ಮಾಡುವ ಕಾರ್ಯಕ್ಕೆ ವೇಗ ನೀಡಬೇಕು. ಗ್ರಾಹಕ ಸಂಬಂಧಿ ಸಮಸ್ಯೆಗಳ ಪರಿಹಾರ, ಹೊಸ ವಿದ್ಯುತ್ ಸಂಪರ್ಕ ನೀಡಿಕೆ ಸೇರಿದಂತೆ ವಿವಿಧ ಸೇವೆಗಳನ್ನು ಒಂದೇಕಡೆ 24 ಗಂಟೆಯೊಳಗೆ ಒದಗಿಸುವ ಫಾಸ್ಟ್ಟ್ರಾಕ್ ಸೆಲ್ ಅನ್ನು ಕೂಡಲೇ ಆರಂಭಿಸಲು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button