ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ದಲ್ಲಾಳಿಗಳ ಹೋರಾಟವಾಗಿ ಉಳಿದಿದೆ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಮೈಸೂರು : ದೆಹಲಿಯಲ್ಲಿ ಹಲವು ತಿಂಗಳಿನಿಂದ ನಡೆಯುತ್ತಿರುವ ಹೋರಾಟ ದಲ್ಲಾಳಿಗಳ ಹೋರಾಟವಾದಿ ಉಳಿದಿದೆ ಅಷ್ಟೇ ಎಂದು ಕೇಂದ್ರ ಕೃಷಿ ಖಾತೆ ಸಚಿವ ಶೋಭಾ ಕರಂದ್ಲಾಜೆ ಟೀಕಾ ಪ್ರಹಾರ ನಡೆಸಿದ್ದಾರೆ.
ಸುದ್ದಿಗಾರೊಂದಿಗೆ ಮಾತನಾಡಿದ ಅವರು, ರೈತರ ಮನವೊಲಿಸಬಹುದು. ಆದರೆ, ರೈತರಂತೆ ನಟಿಸುವವರ ಮನವೊಲಿಸಲು ಸಾಧ್ಯವಿಲ್ಲ.ಕೇಂದ್ರದ ಹೊಸ ಕಾಯ್ದೆಗಳಿಂದ ರೈತರು ಎಪಿಎಂಸಿ ಹೊರತಾಗಿ ಹೊರಗೆ ವ್ಯಾಪಾರ ಮಾಡಬಹುದು ಎಂದು ಸಮರ್ಥಿಸಿಕೊಂಡರು.
ಪ್ರಧಾನಿ ಮೋದಿ ಅವರು ದೇಶದ ರೈತನ ಮಗಳೊಬ್ಬಳನ್ನು ಗುರುತಿಸಿ ಕೃಷಿ ಖಾತೆ ನೀಡಿದ್ದಾರೆ. ಹಳ್ಳಿಯಲ್ಲಿ ನಾನು ಓದುವಾಗ ವಿದ್ಯುತ್ , ರಸ್ತೆ ಕೂಡ ಇರಲಿಲ್ಲ. ಅಂತಹ ಹಳ್ಳಿಯಿಂದ ಬಂದವಳಿಕೆ ಇಂತಹ ಖಾತೆ ಕೊಟ್ಟು ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ನಾವು ದೇಶದ ಶೇಕಡ 80ರಷ್ಟು ರೈತರ ಹಿತ ಕಾಯಬೇಕಿದೆ. ಅವರು ಬೇರೆ ಬೇರೆ ಕೆಲಸಗಳಿಗೆ ಹೋಗದೆ ಕೃಷಿಯಲ್ಲೇ ಉಳಿಯುವಂತೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಇಲಾಖೆಯಿಂದ ಕಾರ್ಯಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.
ಕೇಂದ್ರ ಕೃಷಿ ಸಚಿವೆಯಾದ ನಂತರ ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳಿಗೂ ಪ್ರವಾಸ ಮಾಡುವೆ. ಒಂದೊಂದು ಜಿಲ್ಲೆಯ ರೈತರ ಸಮಸ್ಯೆ ಬೇರೆಯದಾಗಿದೆ. ಅಯಾ ಜಿಲ್ಲೆಗಳಿಗೆ ತೆರಳಿ ಅಲ್ಲಿನ ಬೆಳೆ, ಸಮಸ್ಯೆಗಳನ್ನು ಪರಿಹಾರ ಮಾಡುವ ಕೆಲಸ ಮಾಡುತ್ತೇನೆ. ಕೊರೊನಾದಿಂದ ಕೃಷಿಗೆ ತೊಡಕಾಗಿದೆ ಅಂತ ಇಲ್ಲ. ದೇಶದಲ್ಲಿ ದಾಖಲೆ ಪ್ರಮಾಣದಲ್ಲಿ ಆಹಾರ ಪದಾರ್ಥಗಳ ಶೇಖರಣೆ ಆಗಿರೋದನ್ನು ವರದಿಗಳು ಹೇಳುತ್ತಿವೆ. ಕೊರೊನಾ ಸಂದರ್ಭದಲ್ಲೂ ದೇಶದಲ್ಲಿ ದಾಖಲೆ ಪ್ರಮಾಣದ ಕೃಷಿ ಉತ್ಪನ್ನ ಶೇಖರಣೆಯಾಗಿದೆ. ಅದೇ ರೀತಿ ದಾಖಲೆ ಪ್ರಮಾಣದಲ್ಲಿ ಹಣ್ಣು-ತರಕಾರಿ ಬೆಳೆಯಲಾಗಿದೆ. ನಗರಗಳಲ್ಲಿ ಇದ್ದ ನಮ್ಮ ಯುವಕರು ಹಳ್ಳಿಗೆ ಹೋಗಿ ಕೃಷಿ ಮಾಡಿದರ ಪರಿಣಾಮ ಇದು ಸಾಧ್ಯವಾಗಿದೆ ಎಂದರು.
ಇದಕ್ಕೂ ಮುನ್ನ ಸಚಿವೆ ಶೋಭಾ ಕರಂದ್ಲಾಜೆ, ಚಾಮುಂಡೇಶ್ವರಿ ದರ್ಶನ ಪಡೆದರು. ಸಂಸದ ಪ್ರತಾಪಸಿಂಹ , ಶಾಸಕ ನಾಗೇಂದ್ರ ಮತ್ತಿತರ ಮುಖಂಡರು ಇದ್ದರು.
ಉಗ್ರರ ಅಟ್ಟಹಾಸ
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ವಿಚಾರವಾಗಿ ಮಾತನಾಡಿ, ಇದು ತೀವ್ರ ಖಂಡನೀಯ ವಿಚಾರ. ಪ್ರಜಾಪ್ರಭುತ್ವ ರಾಷ್ಟ್ರಗಳ ಮೇಲೆ ಇಂತಹ ದಾಳಿ ನಡೆಯುತ್ತಿರುವುದು ಆತಂಕಕಾರಿಯಾದದ್ದು. ಆಫ್ಗಾನಿಸ್ತಾನದ ಪಕ್ಕದಲ್ಲೇ ಪಾಕಿಸ್ತಾನ ಇದೆ. ಈ ವಿಚಾರದಲ್ಲಿ ಎಲ್ಲಾ ದೇಶಗಳು ಒಟ್ಟಾಗಿ ದನಿ ಎತ್ತಬೇಕು. ವಿಶ್ವಸಂಸ್ಥೆ ಮೇಲೆ ಒತ್ತಡ ಹೇರಿ ಸಮಸ್ಯೆ ಬಗೆಹರಿಸಬೇಕು ಎಂದು ಹೇಳಿದರು.
