ರಾಮನಗರ: ಸ್ಫೋಟಕ್ಕೆ ಅಮಾಯಕ ಬಲಿಯಾದ ನಂತರ…

ರಾಮನಗರ: ಸಿಡಿಮದ್ದು ಸ್ಪೋಟಗೊಂಡ ಪರಿಣಾಮ ಕಾರು ಛಿದ್ರಗೊಂಡು ಅಮಾಯಕನ ಪ್ರಾಣ ಹೋಗಿದೆ. ಮೃತನ ಸಾವಿಗೆ ಅಕ್ರಮ ಗಣಿಗಾರಿಕೆಯೇ ಕಾರಣವೆಂದು ಆರೋಪಿಸಲಾಗುತ್ತಿದೆ. ಪ್ರಬಲ ರಾಜಕೀಯ ಮುಖಂಡರಿಂದ ಪ್ರಕರಣ ಮುಚ್ಚಿಹಾಕುವ ಹುನ್ನಾರ ನಡೆಯುತ್ತಿದೆ ಎಂದೂ ಆರೋಪಿಸಲಾಗಿದೆ.
ಆಗಸ್ಟ್ 16, ಸಮಯ ಮಧ್ಯಾಹ್ನ 3.30ಕ್ಕೆ ದೊಡ್ಡದಾದ ಸ್ಪೋಟ ಶಬ್ದ ಕೇಳಿಬಂತು. ಸ್ಪೋಟದ ರಭಸ ಎಷ್ಟರ ಮಟ್ಟಿಗೆ ಇತ್ತೆಂದರೆ, ಸುಮಾರು ಎರಡು ಮೂರು ಕಿ.ಮಿ. ವರೆಗೆ ಈ ಸ್ಪೋಟದ ಶಬ್ದ ಕೇಳಿಸಿದೆ. ಏನಾಗಿದೆ ಎಂದು ನೋಡುವಷ್ಟರಲ್ಲಿ ಧಗ ಧಗನೆ ಕಾರೊಂದು ಛಿದ್ರಗೊಂದು ಉರಿಯುತ್ತಿರೋದು ಕಾಣಿಸಿತು. ಕಾರಿನ ಸಮೀಪ ಹೋಗಿ ನೋಡಿದರೆ ಸಿಡಿಮದ್ದು ಸ್ಪೋಟದ ರಭಸಕ್ಕೆ ಕಾರಿನಲ್ಲಿದ್ದ ಓರ್ವ ವ್ಯಕ್ತಿ ಸಜೀವವಾಗಿ ಸುಟ್ಟು ಹೋಗಿದ್ದ. ಮೃತ ವ್ಯಕ್ತಿಯ ಹೆಸರು ಮಹೇಶ್ ಎಂದು ತಿಳಿದು ಬಂದಿದ್ದು, ಕನಕಪುರ ತಾಲೂಕಿನ ದೊಡ್ಡಾಲಹಳ್ಳಿ ಗ್ರಾಮದಲ್ಲಿ ವಾಸವಿದ್ದ ಎನ್ನಲಾಗಿದೆ.
ಈ ಹೃದಯವಿದ್ರಾವಕ ಘಟನೆ ನಡೆದಿದ್ದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ವಕ್ಷೇತ್ರ ಕನಕಪುರದಲ್ಲಿ. ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಮರಳೆಗವಿ ಮಠದ ಕಾಂಪೌಂಡ್ ಪಕ್ಕದಲ್ಲೆ ಈ ಘಟನೆ ನೆಡೆದಿದೆ. ಮರಳೆಗವಿ ಮಠದ ಸಮೀಪ ನಡೆಯುತ್ತಿದ್ದ ಶಕ್ತಿ ಮೈನಿಂಗ್ಸ್ ಎಂಬ ಕಲ್ಲು ಗಣಿಗಾರಿಕೆಗೆ ಸಂಬಂಧಿಸಿದಂತೆ ಸಿಡಿ ಮದ್ದುಗಳನ್ನು ಕಾರಿನಲ್ಲಿ ಸಾಗಿಸುವಾಗ ಆಕಸ್ಮಿಕವಾಗಿ ಈ ಸ್ಪೋಟಗೊಂಡಿದೆ ಎಂದು ತಿಳಿದು ಬಂದಿದೆ. ಕಲ್ಲು ಗಣಿಗಾರಿಕೆಯ ಮಾಲೀಕರು ಶಿವರುದ್ರಪ್ಪ ಎಂಬವರ ಮಾಲೀಕತ್ವದಲ್ಲಿ ಕಳೆದ ಹಲವು ವರ್ಷಗಳಿಂದ ಗಣಿಗಾರಿಕೆ ಮಾಡಲಾಗುತ್ತಿತ್ತು. ಈ ಕ್ವಾರೆಯಲ್ಲಿಯೇ ಹಲವು ವರ್ಷಗಳಿಂದ ಮಹೇಶ್ ಕೆಲಸ ಮಾಡಿಕೊಂಡು ಬರುತ್ತಿದ್ದು, ಈ ಕ್ವಾರೆಗೆ ಬೇಕಿದ್ದ ಬಿಡಿ ಉಪಕರಣಗಳನ್ನ ತಂದು ಕೊಡುತ್ತಿದ್ದ ಎಂದು ಹೇಳಲಾಗುತ್ತಿದೆ.
ಹಿರಿಯ ಪೋಲೀಸ್ ಅಧಿಕಾರಿಗಳ ಭೇಟಿ ಪರಿಶೀಲನೆ:
ಸ್ಫೋಟ ಸ್ಥಳಕ್ಕೆ ಐಜಿಪಿ ಚಂದ್ರಶೇಖರ್ ಹಾಗೂ ರಾಮನಗರ ಎಸ್ಪಿ ಗಿರೀಶ್ ಭೇಟಿ ನೀಡಿ ಸಮಗ್ರ ಪರಿಶೀಲನೆ ನಡೆಸಿದರು. ಸ್ಥಳೀಯ ಪೋಲೀಸರಿಂದ ಸಂಪೂರ್ಣ ಮಾಹಿತಿ ಪಡೆದು, ಸ್ಪೋಟಕ್ಕೆ ನಿಖರ ಕಾರಣ ಏನು ಎಂದು ತಿಳಿದು ಬಂದಿಲ್ಲ. ಸ್ಪೋಟದ ಬಗ್ಗೆ ಸಮಗ್ರ ತನಿಖೆ ನಡೆಯುತ್ತಿದೆ ತನಿಖೆ ನಂತರ ಘಟನೆ ಬಗ್ಗೆ ಪೂರ್ಣ ಮಾಹಿತಿ ಲಭ್ಯವಾಗಲಿದೆ. ಮೇಲ್ನೋಟಕ್ಕೆ ಇದೊಂದು ಸ್ಪೋಟಕ ತುಂಬಿದ ಜಿಲೆಟಿನ್ ಕಡ್ಡಿಗಳ ತೀವ್ರ ಸ್ಪೋಟ ಆಗಿಬಹುದೆಂದು ಶಂಕಿಸಲಾಗಿದೆ. ಎಫ್ ಎಲ್ ಎಸ್ ತನಿಖಾ ತಂಡದ ಮಾಹಿತಿಯೊಂದಿಗೆ ಮತ್ತಷ್ಷು ಸತ್ಯಗಳು ಬಹಿರಂಗ ಆಗಲಿದೆ. ಯಾರೇ ತಪ್ಪಿತಸ್ಥರಿದ್ದರೂ ಸೂಕ್ತ ಕ್ರಮ ಜರುಗಿಸುವುದಾಗಿ ಕೇಂದ್ರ ವಲಯ ಐಜಿಪಿ ಚಂದ್ರಶೇಖರ್, ರಾಮನಗರ ಎಸ್ಪಿ ಎಸ್ ಗಿರೀಶ್ ತಿಳಿಸಿದ್ದಾರೆ.
ಈ ಪ್ರಕರಣದ ಸಮಗ್ರ ತನಿಖೆ ನಡೆಸಿದ್ರೆ ಪ್ರಭಾವಿ ರಾಜಕೀಯ ಮುಖಂಡರ ಕೈವಾಡ ಇರುವುದು ಬೆಳಕಿಗೆ ಬರಲಿದೆ. ತನಿಖೆ ಹಳ್ಳ ಹಿಡಯಲು ನಾವು ಬಿಡುವುದಿಲ್ಲ. ಮೃತನ ಕುಟುಂಬಕ್ಕೆ ಒಂದು ಕೋಟಿ ರೂ ಪರಿಹಾರ ನೀಡಬೇಕು. ಹಾಗೂ ಕುಟುಂಬದವರೊಬ್ಬರಿಗೆ ಸರ್ಕಾರಿ ಹುದ್ದೆ ನೀಡಬೇಕೆಂದು ದಲಿತ ಮುಖಂಡ ನೀಲಿ ರಮೇಶ್ ಒತ್ತಾಯ ಮಾಡಿದ್ದಾರೆ.




