ಚಿಕ್ಕಮಗಳೂರು
ವಾಹನವನ್ನು ಅಡ್ಡಗಟ್ಟಿ ದಾಳಿ ಮಾಡಿದ ಕಾಡಾನೆ; ನಾಲ್ವರಿಗೆ ಗಾಯ

ಚಿಕ್ಕಮಗಳೂರು: ರಸ್ತೆಯಲ್ಲಿ ಪ್ರತ್ಯಕ್ಷವಾದ ಕಾಡಾನೆಯೊಂದು ವಾಹನದ ಮೇಲೆ ದಾಳಿ ನಡೆಸಿ ನಾಲ್ವರಿಗೆ ಗಾಯಗಳಾಗಿದ್ದು, ಓರ್ವನ ಸ್ಥಿತಿ ಚಿಂತಾಜನಕವಾಗಿದೆ.
ಆಲ್ದೂರು ಅರಣ್ಯ ವ್ಯಾಪ್ತಿಯ ಕುಂದೂರು ಅರಣ್ಯದ ನಡುವಿನ ರಸ್ತೆಯಲ್ಲಿ ಸೋಮವಾರ ಬೆಳಗ್ಗೆ ಈ ಭಯಾನಕ ಘಟನೆ ನಡೆದಿದೆ. ಮಾರುತಿ ಓಮ್ನಿ ವಾಹನದಲ್ಲಿ ನಾಲ್ವರು ಸಂಚಾರ ಮಾಡುತ್ತಿದ್ದಾಗ ರಸ್ತೆಗೆ ಬಂದಿರುವ ಕಾಡಾನೆ, ಕಾರನ್ನು ಅಡ್ಡಗಟ್ಟಿ ಗುದ್ದಿ ನಜ್ಜುಗುಜ್ಜು ಮಾಡಿದೆ.
ಜೋಳದಾಳ್ ಗ್ರಾಮದವರಾಗಿದ್ದು, ಹೊರನಾಡು ದೇಗುಲಕ್ಕೆ ಹೋಗುತ್ತಿದ್ದಾಗ ಹೆಬ್ಬಳಗದ್ದೆ ಎಂಬಲ್ಲಿ ಘಟನೆ ನಡೆದಿದೆ. ಚಂದ್ರೇಗೌಡ ಎಂಬುವರಿಗೆ ತೀವ್ರ ಗಾಯಗಳಾಗಿದ್ದು, ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಪತ್ನಿ ಮೋಹಿನಿ, ಮಗ ಅವಿನಾಶ್ ಮತ್ತು ರಾಜಮ್ಮ ಎಂಬುವರಿಗೆ ಗಾಯಗಳಾಗಿದ್ದು, ಹತ್ತಿರದ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.




