150 ಕೋಟಿ ವೆಚ್ಚದ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ಶೀಘ್ರದಲ್ಲೇ ಲೋಕಾರ್ಪಣೆ: ಸಚಿವ ಕಾರಜೋಳ

ಬೆಳಗಾವಿ : ಸಂಗೊಳ್ಳಿ ರಾಯಣ್ಣನ ಹೆಸರು ಜನ್ಮ ದಿನಾಚರಣೆಗೆ ಮಾತ್ರ ಸೀಮಿತವಲ್ಲ. ರಾಯಣ್ಣನ ಹೆಸರಿನ 150 ಕೋಟಿ ರೂಪಾಯಿ ವೆಚ್ಚದ ಸೈನಿಕ ಶಾಲೆ ನಿರ್ಮಾಣ ಮಾಡಲಾಗುತಿದ್ದು, ಶೀಘ್ರದಲ್ಲೇ ಲೋಕಾರ್ಪಣೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ತಿಳಿಸಿದರು.
ಕಿತ್ತೂರು ಸಂಸ್ಥಾನದ ರಕ್ಷಣೆಗೆ ನಿಂತ ಸಂಗೊಳ್ಳಿ ರಾಯಣ್ಣ ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕಾಗಿ ಅವರ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ದೇಶದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಅನೇಕ ಮಹನೀಯರು ಪ್ರಾಣತ್ಯಾಗ ಮಾಡಿದ್ದು, ಅದರಲ್ಲಿ ರಾಯಣ್ಣ ಪಾತ್ರ ಬಹಳ ಮಹತ್ವದಾಗಿದೆ ಎಂದು ಹೇಳಿದರು.
ಕಿತ್ತೂರು ನಾಡನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ಸಂಗೊಳ್ಳಿ ರಾಯಣ್ಣನಿಗೆ ಸಲ್ಲುತ್ತದೆ. ನಾಡಿಗೆ ರಾಯಣ್ಣನ ಕೊಡುಗೆ ಅಪಾರವಾಗಿದ್ದು, ಭವಿಷ್ಯದಲ್ಲಿ ಅವರನ್ನು ಸದಾ ಜೀವಂತವಾಗಿರಿಸಲು ನಿರ್ಮಾಣ ಹಂತದಲ್ಲಿರುವ ಅನೇಕ ಹೊಸ ಶಾಲೆಗಳಿಗೆ ರಾಯಣ್ಣನ ಹೆಸರು ನಾಮಕರಣ ಮಾಡಲಾಗುವದು ಎಂದರು.
ರಾಯಣ್ಣನ ಹೆಸರು ಜನ್ಮದಿನ ಆಚರಣೆಗೆ ಮಾತ್ರ ಸೀಮಿತವಲ್ಲ, ರಾಯಣ್ಣನ ಹೆಸರಿನಲ್ಲಿ 150 ಕೋಟಿ ರೂಪಾಯಿ ವೆಚ್ಚದಲ್ಲಿ ಸೈನಿಕ ಶಾಲೆ ನಿರ್ಮಾಣ ಮಾಡಲಾಗುತ್ತಿದೆ. ರಾಯಣ್ಣನ ಜೀವನ ಚರಿತ್ರೆ ಯುವಪೀಳಿಗೆಯ ಪ್ರೇರಣೆ ಮತ್ತು ಶಕ್ತಿ, ಮಕ್ಕಳಲ್ಲಿ ದೇಶಪ್ರೇಮ ಸಾರುವ ದಂತಕತೆಯಾಗಿದೆ ಎಂದು ತಿಳಿಸಿದರು.
ರಾಯಣ್ಣ ಹೆಸರಿನಲ್ಲಿ ಸೈನಿಕ ಶಾಲೆ ನಿರ್ಮಾಣ ಮಾಡುತ್ತಿರುವದು ಹೆಮ್ಮೆಯ ವಿಷಯವಾಗಿದೆ ಜೊತೆಗೆ ರಾಯಣ್ಣನ ಸಮಾಧಿಯಿರುವ ನಂದಡಗದಲ್ಲಿ ಚಿತ್ರಕಲೆ ಶಿಲ್ಪ ಕಲೆಗಳನ್ನು ನಿರ್ಮಾಣ ಮಾಡುವುದರ ಮೂಲಕ ಮ್ಯೂಸಿಯಂ ಮಾಡಲಾಗುವುದು ಎಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪದವಿ ಕಾಲೇಜು ಪ್ರಾಚಾರ್ಯ ಎಂ. ಜಯಪ್ಪ ತಿಳಿಸಿದರು.




