ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ತರಲು ಸರ್ಕಾರ ಕಟಿಬದ್ದ: ಸಚಿವ ಡಾ. ಅಶ್ವತ್ಥ್ ನಾರಾಯಣ್

ರಾಮನಗರ: ಮೇಕೆದಾಟು ಯೋಜನೆಯನ್ನ ಅನುಷ್ಠಾನಕ್ಕೆ ತರಲು ನಮ್ಮ ಸರಕಾರ ಕಟಿಬದ್ದವಾಗಿದ್ದು, ಕಾರ್ಯ ರೂಪಕ್ಕೆ ತರಲು ಸಿದ್ದತೆ ನಡೆಯುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಅಶ್ವತ್ಥ್ ನಾರಾಯಣ್ ತಿಳಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೇಂದ್ರ ಸರಕಾರ ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ಮಲತಾಯಿ ಧೋರಣೆ ತೋರುತ್ತಿಲ್ಲ ಎಂದರು.
ಅದೇ ರೀತಿ ಮೇಕೆದಾಟು ಯೋಜನೆಯಲ್ಲಿ ಕೇಂದ್ರ ಸರಕಾರ ನಮ್ಮ ಪರ ಇದೆ. ನಮ್ಮ ಜನತೆಗೆ ನ್ಯಾಯ ಕೊಡಿಸಲು ನಾವು ಹೋರಾಟ ಮಾಡುತ್ತೇವೆ. ಕೋಡಿಹಳ್ಳಿ ಚಂದ್ರಶೇಖರ್ ಅವರು ಮೇಕೆದಾಟು ವಿಚಾರದಲ್ಲಿ ಒಲವು ತೋರಿರುವುದು ಸ್ವಾಗತವೆಂದು ಹೇಳಿದರು.
ಹಿಂದಿನ ಮುಖ್ಯಮಂತ್ರಿ ಹಾಗೂ ಇಂದಿನ ಮುಖ್ಯಮಂತ್ರಿಗಳು ಮೇಕೆದಾಟು ಯೋಜನೆ ಪರವಾಗಿದ್ದಾರೆ. ಕಾನೂನಿನ ತೊಡಕುಗಳನ್ನ ಸಹ ಬಗೆಹರಿಸಲು ಪ್ರಯತ್ನ ನಡೆಯುತ್ತಿದೆ. ಕೇಂದ್ರದ ಮೇಲೆ ಒತ್ತಡ ತಂದು ಯೋಜನೆಗೆ ಅನುಮತಿ ಪಡೆಯುವ ಕೆಲಸ ಮಾಡಲಾಗುತ್ತದೆ ಎಂದರು.
ತಮಿಳುನಾಡು ಹಾಗೂ ಪಾಂಡಿಚೇರಿ ರಾಜ್ಯಗಳಿಂದ ಕಾವೇರಿ ವಿಚಾರದಲ್ಲಿ ಸಮಸ್ಯೆ ಎದುರಿಸುತ್ತಿದ್ದೇವೆ. ಈ ಯೋಜನೆಯಿಂದ ಎರಡು ರಾಜ್ಯಕ್ಕೆ ಯಾವುದೇ ಅನ್ಯಾಯ ಆಗಲ್ಲ. ಅವರಿಗೆ ಸಲ್ಲಿಕೆಯಾಗಬೇಕಿರುವ ನೀರು ಸಲ್ಲುತ್ತೆ. ಈ ಯೋಜನೆ ವಿಚಾರದಲ್ಲಿ ಎಲ್ಲರ ಸಹಕಾರ ಅತಿಮುಖ್ಯವೆಂದು ಮನವಿ ಮಾಡಿದರು.
