ತಾಲಿಬಾನ್ ಉಗ್ರರ ವಶವಾದ ಅಪ್ಘಾನಿಸ್ತಾನ: ಅಧಿಕಾರ ಹಸ್ತಾಂತರ ಘೋಷಿಸಿದ ಅಧ್ಯಕ್ಷ ಮಹಮ್ಮದ್ ಆಶ್ರಫ್ ಘನಿ

ಕಾಬೂಲ್ : ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ಮಿತಿ ಮೀರಿದ್ದು, ಕಾಬೂಲ್ ಗೆ ಎಂಟ್ರಿ ಕೊಟ್ಟಿರುವ ಉಗ್ರರಿಗೆ ಆಫ್ಘಾನಿಸ್ತಾನ ಸರ್ಕಾರ ಶರಣಾಗಿದೆ.
ಕಂದಹಾರ್, ಲಷ್ಕರ್ ವಾಗ್, ಘಾಜ್ನಿಯಂತಹ 18 ಪ್ರಮುಖ ನಗರಗಳನ್ನು ಕೈವಶ ಪಡೆದಿರುವ ತಾಲಿಬಾನ್ ಉಗ್ರರು, ಕಾಬೂಲ್ ಗೆ ಲಗ್ಗೆಯಿಟ್ಟಿದ್ದು, ಕಾಬೂಲ್ ಗೇಟ್ ಬಳಿ ನಾವು ಕಾಯುತ್ತಿದ್ದೇವೆ. ಶಾಂತಿಯುತ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟು ಅಧಿಕಾರ ಹಸ್ತಾಂತರಿಸುವಂತೆ ಉಗ್ರರು ಅಫ್ಘಾನಿಸ್ತಾನ ಸರ್ಕಾರಕ್ಕೆ ಸಂದೇಶ ರವಾನಿಸಿದ್ದಾರೆ.
ಇದೇ ವೇಳೆ ಅಫ್ಘಾನಿಸ್ತಾನ ಅಧ್ಯಕ್ಷ ಮಹಮ್ಮದ್ ಅಶ್ರಫ್ ಘನಿ ತಮ್ಮ ನಿವಾಸದಲ್ಲಿ ತಾಲಿಬಾನ್ ಉಗ್ರರ ಜೊತೆ ಮಾತುಕತೆ ನಡೆಸಿದ್ದು, ಅಧಿಕಾರ ಹಸ್ತಾಂತರಿಸುವ ನಿಟ್ಟಿನಲ್ಲಿ ಚರ್ಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಘನಿ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗಿದೆ.
ಅಫ್ಘಾನಿಸ್ತಾನದ ಗೃಹ ಸಚಿವ ಅಬ್ದುಲ್ ಸತ್ತಾರ್ ಅವರು ತಾಲಿಬಾನ್ ಗೆ ಶಾಂತಿಯುತವಾಗಿ ಅಧಿಕಾರ ಹಸ್ತಾಂತರ ಮಾಡುವುದಾಗಿ ತಿಳಿಸಿದ್ದಾರೆ. ಈ ಮೂಲಕ ತಾಲಿಬಾನ್ ಕಮಾಂಡರ್ ಮುಲ್ಲಾ ಅಬ್ದುಲ್ ಘನಿ ಮುಂದಿನ ಅಫ್ಘಾನಿಸ್ತಾನದ ನೂತನ ಅಧ್ಯಕ್ಷರಾಗಲಿದ್ದಾರೆ ಎನ್ನುವ ಸುದ್ದಿ ತಿಳಿದು ಬಂದಿದೆ.
